ಶ್ರೀ ಎರ್ರಿತಾತನ ಪವಾಡಗಳು

ಶ್ರೀ ಎರ್ರಿತಾತನ ಪವಾಡಗಳು

ತಿಕ್ಕಯ್ಯನವರನ್ನು ಕಳಿಸಿದ ತಾತ ಸ್ವಸ್ಥವಾಗಿದ್ದು ಬಿಟ್ಟರು. ಕೂಡಲು, ಮಲಗಲು ಭಕ್ತರಿಗೆ ದರ್ಶನ ನೀಡಲು ಶ್ರೀಮಠದ ಪ್ರವೇಶದ ಬಲಭಾಗದಲ್ಲಿ ಒಂದು ವೇದಿಕೆಯನ್ನು ಕಟ್ಟಲಾಗಿತ್ತು. ಸ್ನಾನಕ್ಕೆ ಒಳಗೆ ಪ್ರದಕ್ಷಿಣೆಯ ಮೂಲೆಯಲ್ಲಿ ಬಚ್ಚಲು ಇತ್ತು , ಪ್ರತಿದಿನ ಭಕ್ತರು ತಾತನವರಿಗೆ ಉಣಿಸಲು ಭಕ್ತಿಯಿಂದ ‘ಎಡೆ’ಗಳನ್ನು ತರುತ್ತಿದ್ದರು. ಉಂಡವರ ಕಾರ್ಯವಾಗುವ, ಉಣ್ಣದವರ ಕಾರ್ಯ ಆಗದಿರುವ ಪ್ರಸಾದ ಪವಾಡಗಳು ನಡೆಯುತ್ತಿದ್ದವು. ಬಲವಂತಮಾಡಿದಾಗ ‘ತಗೋ-ತಗೋ-ತಗೋ ` ಎಂದು ಕೈಕೆಳಗೆ ಮಾಡಿ ಆಕ್ಷಣದಲ್ಲಿಯೇ ಬೇಡ-ಬೇಡ-ಬೇಡ ಎಂದು, ನಿಡಿದಾಗಿ ಉರಿದಿರುಗಿ ಬೆಳೆದ ಉಗುರಿನ ಬೆರಳಾಗಿಸಿ ಕೈ ಮೇಲಕ್ಕೆ ತೆಗೆದುಕೊಂಡುಬಿಡುತ್ತಿದ್ದರು. ಈ ಲೀಲೆ ಆಯಾ ಭಕ್ತರ ಭಾಗ್ಯದಂತೆ ನಡೆಯುತ್ತಿತ್ತು. ತಮಗೆ ಬೇಕಾದಾಗ ‘ತಾರಯ್ಯ ತಾ’ ಎಂದು ಕೇಳಿ ತಾವೂ ಸ್ವೀಕರಿಸಿ ಅವರಿಗೂ ನೀಡುತ್ತಿದ್ದರು.

ವಿಶೇಷವಾಗಿ ದಿನದಿನಕ್ಕೆ ಜನರು ತಾತನವರ ಸಂದರ್ಶನಕ್ಕೆ ಬರುವುದು ಹೆಚ್ಚಾಯಿತು. ಯಾರಿಗೆ ಯಾವುದೇ ಆಪತ್ತು ವಿಪತ್ತುಗಳು ಬಂದರೂ ತಾತನವರನ್ನು ಕೇಳಲು ಬರುವ ರೂಢಿಯಾಯಿತು. ಉರವಕೊಂಡೆಯ ಗವಿಮಠದ ಕರಿಬಸವ ಸ್ವಾಮಿಗಳು ದೇಹಾಲಸ್ಯದಿಂದಿರುವಾಗ, ಅವರ ಮಠದವರೊಬ್ಬರು ಬಂದು ಕಾಯಿ ಕರ್ಪೂರವಿಟ್ಟು ತಾತನವರ ಮುಂದೆ ನಿಂತಾಗ, ತಾತನವರು ಕಾಯಿಯನ್ನೆತ್ತಿ ಚೂರು ಚೂರಾಗುವಂತೆ ಗೋಡೆಗೊಗೆದು ‘ಜಡ್ಜ್ಮೆಂಟು ತಯಾರಾಗಿದೆ ಹೋಗಯ್ಯ’ ಎಂದರಂತೆ. ಅದೇ ಹೊತ್ತಿಗೆ ಉರವಕೊಂಡೆಯ ಶ್ರೀಗಳು ಲಿಂಗೈಕ್ಯರಾದರೆಂದು ಹೇಳಲಾಗುತ್ತೆ.

ಈ ಲೇಖಕ ಬಾಲ್ಯದಲ್ಲಿ ತಾಯಿಗಾದ ಕಾಯಿಲೆಯ ನಿವಾರಣೆಗಾಗಿ ಬೇಡಿಕೊಳ್ಳಲು ತಂದೆಯೊಂದಿಗೆ ಬಂದು ನಿಂತಾಗ ತಾತನವರು ಕೂತಿದ್ದರು. ಕೇಳುವಷ್ಟರಲ್ಲಿಯೇ ‘ಹೋಗಯ್ಯ ಬಾಯಿ ಬಾಯಿ ಬಡಕೋ `ಎಂದು ತಟ್ಟನೆ ನುಡಿದುಬಿಟ್ಟರು. ಕೇಳುವುದೇನೂ ಉಳಿದಿರಲಿಲ್ಲ. ನಿರಾಶರಾಗಿ ತಂದೆಯೊಂದಿಗೆ ಮನೆಗೆ ಬಂದಾಗ ತಾಯಿ ತೀರಿಕೊಂಡಿದ್ದರು.

ಒಮ್ಮೆ ಯಾರೋ ಶ್ರೀಮಂತ ಭಕ್ತರೊಬ್ಬರು ತಮ್ಮ ಬಯಕೆ ಈಡೇರಿದ್ದಕ್ಕಾಗಿ ತಾತನವರ ಎರಡೂ ಕೈಗಳಿಗೆ ಚಿನ್ನದ ಕಡಗಗಳನ್ನು ತೊಡಿಸಿ ಹೋದರು. ಅದೇ ರಾತ್ರಿ ಯಾರೋ ಆ ಕಡಗಗಳನ್ನು ಬಿಚ್ಚಿಕೊಂಡರು. ಮುಂಜಾನೆ ನೋಡಿದ ಸಿದ್ದ ಲಿಂಗಪ್ಪನಿಗೆ ಎದೆ ಒಡೆಯುವಂತಾಯಿತು. ತಾತನ ಬಳಿ ಬಂದು ಎಲ್ಲೆಪ್ಪ ಕಡಗ! ಯಾರು ಬಂದಿದ್ದರು, ಯಾರು ತೆಗೆದುಕೊಂಡು ಹೋದರು, ನೀವೇಕೆ ಸುಮ್ಮನಿದ್ದಿರಿ, ಯಾರನ್ನಾದರೂ ಕರೆಯಬೇಕಾಗಿತ್ತಲ್ಲ, ಯಾಕೆ ಕೂಗಲಿಲ್ಲ, ಹೀಗೆ ಕಂಡಾಬಟ್ಟೆ ಪ್ರಶ್ನೆಗಳನ್ನು ಮೇಲಿಂದ ಮೇಲೆ, ಕೇಳುತ್ತಿದ್ದ ಸಿದ್ದಲಿಂಗಪ್ಪನ ಮೇಲೆ ತುಂಬಾ ಬೇಸರವಾದ ತಾತಯ್ಯನವರು ‘ಹೋಗಯ್ಯ ಇದ್ದೋನು ಕೊಟ್ಟ ಇಲ್ದೋನು ವಯ್ದ ` ಎಂದು ಗದರಿದರು. ಮಾಡೋದೇನು ತಾತ ಮತ್ತೆ ಮಲಗಿಬಿಟ್ಟರು. ಆತ ಅವಧೂತ ಅವನ ಮಾತು ಅಷ್ಟೆ.

ಸಿದ್ದಲಿಂಗಪ್ಪನವರಿಗೆ ಸಮಾಧಾನವಾಗಲಿಲ್ಲ. ಮಠದ ಪರಿಚಾರಕರನ್ನು ಇತರರನ್ನು ಅಬ್ಬರಿಸಿ ಕೇಳಿದರು. ಗದ್ದಲವೇ ಅಯಿತು. ಅವರಿವರು ಬಂದರು. ಅವರು ಗದರಿದರು ಏನೇನೋ ಮಾತಾಡಿದರು. ಹೋದ ಕಡಗಗಳು ಸಿಕ್ಕಲಿಲ್ಲ. ಹೊತ್ತೂ ಆಯಿತು. ಹೇಗೋ ಸಮಾಧಾನವನ್ನು ತಂದುಕೊಂಡು ಸಿದ್ದಲಿಂಗಪ್ಪನವರು ತಾತನವರ ನಿತ್ಯಕ್ರಿಯೆಗಳನ್ನು ನಡೆಸುತ್ತಿರುವಲ್ಲಿ ಸೂರ್ಯನು ಅಸ್ತಂಗತನಾಗಿದ್ದ. ಮಠದ ಆವರಣದ ಹಿಂಭಾಗದಲ್ಲಿ ಗದ್ದಲವೆದ್ದಿತು. ಜನಸಮೂಹದಲ್ಲಿದ್ದವರೊಬ್ಬರನ್ನು ಭಯವಿಲ್ಲದೆ ನುಗ್ಗಿ ಹಾವೊಂದು ಕಚ್ಚಿ ಪಾರಾಗಿತ್ತು. ಕ್ಷಣದಲ್ಲಿಯೇ ಈ ಘಟನೆ ನಡೆದು ಹೋಯಿತು. ಕಚ್ಚಿದವನನ್ನು ತಾತನವರ ಬಳಿಯಲ್ಲಿ ತಂದು ಹಾಕಿದರು. ಇದಾವುದರ ಗೊಡವೆ ಇಲ್ಲದೆ ತಾತ ಹಾಯಾಗಿ ಮಲಗಿಬಿಟ್ಟಿದ್ದರು. ಅವನ ಪ್ರಾಣ ಯಾವಾಗಲೋ ಹೋಗಿತ್ತು. ಅದನ್ನು ಕಂಡ ಅವರಲ್ಲೊಬ್ಬರು ‘ಕಡಗದ ಕಳ್ಳ ಇವನೇ ಇರಬೇಕು’ ಎಂದ ಇನ್ನೊಬ್ಬನು ‘ಹೌದು ಬಿಡು ಜನರಲ್ಲಿದ್ದ ಇವನನ್ನೆ ಹಾವು ಕಚ್ಚಬೇಕಾದರೆ ಇವನೇ ಇದ್ದೀತು’ ಎಂದು ದನಿಗೂಡಿಸಿದ. ಆ ದನಿಗೆ ಕೆಲವರು ‘ಹೂ` ಗುಟ್ಟಿದರು. ಸತ್ತವನು ಯಾವೂರವನೂ ಅಲ್ಲ ಅದೇ ಊರವನೇ. ಸದಾ ತಾತನವರ ಸಮೀಪದಲ್ಲಿದ್ದು ಆ ಸೇವೆ ಈ ಸೇವೆಯೆಂದು ಆಕಡೆ ಈಕಡೆ ಅಡ್ಡಾಡುತ್ತಿದ್ದನು. ಏನೂ ಒಲ್ಲದ ತಾತನವರಿಗೆ ಏನು ನೀಡಿದರೂ ಅಷ್ಟೆ, ನೀಡದಿದ್ದರೂ ಅಷ್ಟೆ.

ಪ್ರಸಾದಗಳ್ಳ ಮಡಿವಾಳ:

ಇನ್ನೊಂದು ಚೋದ್ಯವಾದ ವಿಷಯ. ತಾತನವರ ಬಟ್ಟೆಗಳನ್ನು ಮಡಿ ಮಾಡುತ್ತಿದ್ದ ಊರಿನ ಅಗಸನೊಬ್ಬ ಒಂದು ದಿನ ಮಧ್ಯಾಹ್ನ ಮಡಿಬಟ್ಟೆಗಳನ್ನು ಒಣಗಲು ಹಾಕಿ ಸುತ್ತಲು ನೋಡಿದಾಗ ಮಠದಲ್ಲಿ ಯಾರೂ ಇರಲಿಲ್ಲ. ತಾತನವರೂ ಮಲಗಿದ್ದರು. ತೆಂಗಿನಕಾಯಿ ಒಡೆದ ಹೋಳು ಅಲ್ಲಿತ್ತು.ಮೆತ್ತಗೆ ಅದನ್ನು ತೆಗೆದುಕೊಂಡ. ಅದಕ್ಕೆ ಬೆಲ್ಲ ಬೇಕಲ್ಲ! ಪಕ್ಕದಲ್ಲಿ ಕಾಣಿಕೆಯ ತಂಬಿಗೆಯಿಂದ ಅರ್ಧಾಣೆ (ಇಂದಿನ ಮೂರು ನಯಾಪೈಸೆ)ಎತ್ತಿಕೊಂಡು ಸೀದಾ ಅಂಗಡಿಗೆ ಹೋಗಿ ಬೆಲ್ಲ ಕೊಂಡು, ಆ ಕೊಬ್ಬರಿಯೊಂದಿಗೆ ತಿಂದ. ಮತ್ತೆ ಸಾಯಂಕಾಲ ಮಠಕ್ಕೆ ಬಂದಾಗ ತಾತ ದಿಂಬಿಗೊರಗಿ ಕಾಲುಚಾಚಿ ಕೂತಿದ್ದರು. ಅವನ ಕಡೆಗೆ ನೋಡದೆ ಒಳಗೆ ಬಂದ ಅವನಿಗೆ ‘ಏನಯ್ಯ ಅರ್ಧಾಣೆ ತರಲೇ ಇಲ್ಲ` ಎಂದರು. ಆ ಮಡಿವಾಳನ ಎದೆ ಧಸಕ್ಕೆಂದು ನಿಂತಲ್ಲಿಯೇ ನಿಂತು ‘ಅಯ್ಯಪ್ಪಾ! ಮಲಿಗ್ಯಾನಂತ ಈ ಕೆಲಸ ಮಾಡಿದೆ, ತಾತಯ್ಯನಿಗೆಲ್ಲಾ ಗೊತ್ತು, ತಪ್ಪಾಯಿತು` ಎಂದು ಮನಿಗೆ ಓಡಿದ. ಅವನ ವಯಸ್ಸು ಇನ್ನೂ ಚಿಕ್ಕದು ತಾಯಿಯನ್ನು ಕಾಡಿ ಬೇಡಿ ಒಂದಾಣೆಯನ್ನು ತಂದು ಕಾಣಿಕೆಯ ತಂಬಿಗೆಯಲ್ಲಿ ಹಾಕಿದ. ಆ ಊರ ಮಡಿವಾಳ (ಹೆಸರು-ರಾಮಯ್ಯ) ಮುಪ್ಪಿನಲ್ಲಿಯೂ “ತಾತ ಇಂತಾತನಪ್ಪ “ ಎಂದು ಹೇಳಿ ಕೈಮುಗಿದು ನಗುತ್ತಿದ್ದ.

ತಾತ ಬಂಗಾರದ ಕಡಗಕ್ಕೆ ತೋರಿದ ನಿರಾಸಕ್ತಿ ಈ ಅರ್ಧಾಣೆಗೇಕೆ ತೋರಲಿಲ್ಲವೋ! ಅಷ್ಟು ಬೆಲೆಬಾಳುವ ಬಂಗಾರದ ಕಡಗಗಳ ಬಗ್ಗೆ ಇಲ್ಲದ ಲೋಭ ಅರ್ಧಾಣೆಯ ಮೇಲೇಕೆ? ಅವನು ಬಡವ. ಏನೂ ಅರಿಯದ ಹುಡುಗ ಅರ್ಧಾಣೆ ಹೋದರೆ ತಾತನವರಿಗೆ ತನ್ನ ಗಂಟೇನು ಹೋಗುತ್ತಿತ್ತು. ಏನೋ ತನ್ನ ಸಂಪತ್ತೆಲ್ಲಾ ಹೋದಂತೆ ಆ ಅರ್ಧಾಣೆಗೆ ಆಣೆಯನ್ನು ತಂಬಿಗೆಗೆ ಹಾಕಿಸಿಕೊಂಡ. ಯಾರಿಗೆ ಗೊತ್ತು ತನ್ನ ಸೇವೆಯಲ್ಲಿರುವ ಹುಡುಗ ಪರಿಶುದ್ಧನಾಗಿರಬೇಕೆಂದು ಆ ರೀತಿ ಅವನನ್ನು ಎಚ್ಚರಿಸಿ ಬುದ್ಧಿ ಕಲಿಸಿದರೆಂದು ತೋರುವುದು.

ಹುಚ್ಚು ಲಿಂಗಪ್ಪನ ಸೇವೆ:

ನಿತ್ಯ ನಿತ್ಯ ಇಂಥ ಘಟನೆಗಳು, ಆಯಾ ಭಕ್ತರಿಗೆ ಆಗುವ ಅನುಭವಗಳು ಎಷ್ಟೋ ಇರುತ್ತಿದ್ದವು; ಹೀಗಿರುವಾಗ, ಒಂದು ದಿನ ಅತಿ ಕಪ್ಪಾದ ಮೈಬಣ್ಣದವರೊಬ್ಬರು ಮಠಕ್ಕೆ ಬಂದರು. ಅಂಗಾಂಗ ಸೌಷ್ಠವಗಳೂ, ನಿಲುವೂ ಭವ್ಯವಾಗಿತ್ತು. ಆ ಮಠದವರು ಆತನನ್ನು ಒಳಗೆ ಬಿಡಲಿಲ್ಲ. ಆದರೂ ತಾಳ್ಮೆಗೆಡದ ಆ ವ್ಯಕ್ತಿ ಆವರಣದಲ್ಲಿಯೇ ಒಂದು ಕಡೆ ಕೂತುಬಿಟ್ಟರು. ಯಾರಾದರು ಒಂದಷ್ಟು ನೀಡಿದರೆ ಉಣ್ಣುತ್ತಿದ್ದರು. ಇಲ್ಲದಿದ್ದರೆ ಇಲ್ಲ. ಹೆಚ್ಚಾಗಿ ಯಾರೂ ಅವನನ್ನು ಗಮನಿಸಿದ್ದಿಲ್ಲ. ಅವನ ಗಮನವೆಲ್ಲವೂ ಒಳಗಿದ್ದ ತಾತನವರ ಮೇಲಿತ್ತು. ಯಾರೂ ಇಲ್ಲದ ರಾತ್ರಿಯ ವೇಳೆಯಲ್ಲಿ ತಾತನವರ ಬಳಿ ಸಾರಿ ಅವರ ಪಾದಸೇವೆ ಮಾಡುತ್ತಿದ್ದರು.

ಹಲವಾರು ದಿನಗಳು ಕಳೆದವು. ಮಠದ ಆವರಣದ ಕಸವೆಲ್ಲವನ್ನು ಗುಡಿಸಿ ಆ ವ್ಯಕ್ತಿ ತಾನಿರುವ ಸ್ಥಳದಲ್ಲಿ ಹೋಗಿ ಮಲಗುತ್ತಿದ್ದರು. ಈತನು ಮಾಡುವ ಸೇವೆ ಯಾರಿಗೂ ತಿಳಿಯದಿದ್ದರೂ ಮಠದ ಆವರಣ ಸ್ವಚ್ಛವಾಗುತ್ತಿರುವುದು ಕಂಡು ಬರುತ್ತಿತ್ತು. ಇದು ಯಾರಿಂದ ಎಂದು ಪರೀಕ್ಷಿಸಿದಾಗ ಇವರಿಂದಲೇ ಆ ಮಠದ ಸೇವೆ ನಡೆಯುತ್ತಿದೆಯೆಂದು ತಿಳಿದು ಬಂದಿತು. ಮಠದ ಕಾರ್ಯಕರ್ತರಲ್ಲೊಬ್ಬರು ಅವರಿಗೆ ಊಟ ಬಟ್ಟೆ ಕೊಡುವ ಎರ್ಪಾಟು ಮಾಡಿದರು. ಮಠದೊಳಗೆ ಹೋಗಲು ಅವಕಾಶವನ್ನು ಕೊಟ್ಟರು. ಆ ವ್ಯಕ್ತಿ ಹುಬ್ಬಳ್ಳಿ ಸಿದ್ದಾರೂಢರಲ್ಲಿದ್ದ “ಹುಚ್ಚು ಲಿಂಗಪ್ಪ” ಎಂಬುದನ್ನು ಹುಬ್ಬಳ್ಳಿಯಿಂದ ಯಾರೋ ಅವರನ್ನು ಕಂಡವರು ಬಂದಾಗ ಇಲ್ಲಿಯವರಿಗೆ ತಿಳಿಯಿತು.ಆಗಲಂತು ಅವರನ್ನು ಭಕ್ತಿಯಿಂದ ಎಲ್ಲರೂ ಕಾಣುವಂತಾಯಿತು.

ತುಮಕೂರು ಚಕ್ಕುಲಿ

ಹುಚ್ಚು ಲಿಂಗಪ್ಪನವರ ಸೇವೆಯಂತು ನಡೆದೇ ಇತ್ತು, ಒಮ್ಮೆ ತಾತ ‘ತುಮಕೂರು ಚಕ್ಕುಲಿ ತಗೊಂಬಾರಯ್ಯಾ’ ಎಂದರು. ಆ ಹುಚ್ಚು ಲಿಂಗಪ್ಪ ಆಗಿಂದಾಗಲೇ ಹೊರಟರು. ತುಮಕೂರು ಸೇರಿದರು. ಅಂದು ಸಂತೆ, ಕೈಯಲ್ಲಿ ಕಾಸಿಲ್ಲ ಯಾರದೋ ಮೂಟೆ ಹೊತ್ತು ಆರುಕಾಸು ಸಂಪಾದಿಸಿ ಮೂರು ಅಂಗಡಿಗಳಲ್ಲಿ ಮೂರು ಮೂರು ಚಕ್ಕುಲಿಗಳನ್ನು ತೆಗೆದು ಕೊಂಡರು. ಯಾವುದು ರುಚಿಯಿದ್ದರೆ ಅದನ್ನು ತಾತ ತಿನ್ನಲಿ ಎಂದು. ಕಟ್ಟಿಕೊಳ್ಳಲು ಬಟ್ಟೆಯಿರಲಿಲ್ಲ. ಏನಪ್ಪ ಮಾಡುವುದು ಎಂದು ಸುತ್ತಮುತ್ತ ನೋಡಿದಾಗ ಯಾವುದೇ ಒಂದು ಹಳೆಯ ಬಟ್ಟೆ ಸಿಕ್ಕಿತು. ಅದರಲ್ಲಿಟ್ಟುಕೊಂಡು ಹೊರಟರು. ಮೈಮೇಲೆ ಬಟ್ಟೆಯೇನೂ ಇದ್ದಿಲ್ಲ. ನಡುವಿಗೆ ಸುತ್ತಿಕೊಂಡ ಒಂದು ಚಿಕ್ಕ ಪಾವುಡವಿತ್ತು.

ದಾರಿಯಲ್ಲಿ ಒಂದೂರು, ರಾತ್ರಿಯಾಗಿತ್ತು. ಹಸಿವೆಯಾಗಿ ಒಬ್ಬರ ಮನೆಯ ಮುಂದೆ ನಿಂತರು. ಕಳ್ಳನೆಂಬ ಅನುಮಾನದಿಂದ ಆ ಮನೆಯವರು ಅವನನ್ನು ಊರ ಚಾವಡಿಗೆ ಕರೆತಂದು ಚೆನ್ನಾಗಿ ಹೊಡೆದರು. ಅವರಲ್ಲೊಬ್ಬ ತಳವಾರ ಈತ ಕಳ್ಳನಲ್ಲವೆಂದು ದಯೆಯಿಂದ ಮನೆಗೆ ಹೋಗಿ ರೊಟ್ಟಿ ಚೂರೊಂದು ತಂದುಕೊಟ್ಟ.ಹುಚ್ಚು ಲಿಂಗಪ್ಪ ದೈನ್ಯದಿಂದ ಅವನನ್ನು ನೋಡಿದ.ಹೊಟ್ಟೆಗಷ್ಟು ಆಧಾರವಾಯಿತು. ಒಂದು ರೀತಿಯ ನೆಮ್ಮದಿಯಾಗಿ ಮೇಲೆದ್ದರು. ಗುರುವಿಗಾಗಿ ತಂದ ಚಕ್ಕುಲಿಗೆ ಕಿಂಚಿತ್ತೂ ಪೆಟ್ಟಾಗಿರಲಿಲ್ಲ. ಒಂದು ಚೂರು ಮುರಿದಿರಲಿಲ್ಲ. ಗುರುವಿಗರ್ಪಿತವಾಗುವ ಪ್ರಸಾದವನ್ನು ಹೊಡೆತಕ್ಕೆ ಮೈಯೊಡ್ಡಿ ರಕ್ಷಿಸಿಕೊಂಡಿದ್ದರು. ಅದು ಅವರಿಗೆ ಮಹದಾನಂದ. ಕೂಡಲೆ ಆನಂದದ ಉದ್ವೇಗದಲ್ಲಿ ಗಾಡಾಂಧಕಾರದಲ್ಲಿ ಅಡ್ಡದಾರಿ ಹಿಡಿದು ನಡೆದು ತಾತನ ಬಳಿಗೆ ಬಂದರು. ಬಹಳ ಬಳಲಿದ್ದ. ಅದು ಆತನಿಗೇ ಗೊತ್ತಿರಲಿಲ್ಲ. ತಾತನವರಿಗೆ ಗೊತ್ತಾಯಿತು. ಆಸೆಯಿಂದ ಚಕ್ಕಲಿಯನ್ನು ತಿನ್ನಬೇಕೆಂದು ಮುಂದಿಟ್ಟಾಗ ‘ಕಾಶಿಗಂಗೆ ಬರಲೇಳಯ್ಯ’ ಅಂದರು ತಾತ. ನಿರುತ್ಸಾಹಗೊಂಡು ಗುರುವಾಕ್ಯ ಅರ್ಥವಾಗದೆ ‘ಆತನ ಚಿತ್ತ’ ಎಂದು ಭದ್ರವಾಗಿ ಒಂದು ಕಡೆ ಚಕ್ಕುಲಿ ಇಟ್ಟರು.

ಕಾಶಿಗಂಗೆ

ಒಂದು ದಿನವಾಯಿತು ಎರಡು ದಿನವಾಯಿತು.ಚೇಳ್ಳಗುರ್ಕಿಯಲ್ಲಿ ಕಾಶಿಗಂಗೆ ಬರುವುದು ಹೇಗೆ? ಒಂದಕ್ಕೊಂದು ಸಂಬಂಧವಿಲ್ಲದ ಗುರುವಾಕ್ಯ.ವಿಮರ್ಶಿಸಲಿಕ್ಕೂ ಬಾರದು, ನಂಬಲಿಕ್ಕೂ ಬಾರದು. ಆದರೂ ನಂಬಿಯೇ ತಿರಬೇಕು ಎಂದು ಹುಚ್ಚು ಲಿಂಗಪ್ಪ ನಿರುಪಾಯನಾಗಿ ತಾತ ತಿನ್ನುವ ಹೊತ್ತಿಗೆ ಚಕ್ಕುಲಿ ರುಚಿಗೆಡುತ್ತದಲ್ಲಾ ಎಂದು ಯೋಚಿಸುತ್ತಿರುವಾಗ, ಕಾಶಿಯಾತ್ರೆ ಮಾಡಿಕೊಂಡು ಗಿಂಡಿಯಲ್ಲಿ ತೀರ್ಥವನ್ನು ತೆಗೆದುಕೊಂಡು ತಾತನವರಲ್ಲಿಗೆ ಒಬ್ಬ ಭಕ್ತ ಬಂದ. ಅವರನ್ನು ನೋಡಿದ ಕೂಡಲೇ ‘ತಾರಯ್ಯಾ ಚಕ್ಕುಲಿ, ಕಾಶಿಗಂಗೆ ಬಂದಾಳೆ ಬೇಗ ಬಾ’ ಎಂದು ತಾತ ಕರೆದಾಗ ಹುಚ್ಚು ಲಿಂಗಯ್ಯ ದಿಗ್ಗನೆದ್ದು ಸಂತೋಷದಿಂದ ಚಕ್ಕುಲಿಯನ್ನು ತಂದು ಮುಂದಿಟ್ಟ. ತಾತಯ್ಯ ಚಕ್ಕುಲಿ ಕೊಂಚ ತಿಂದರು ‘ತಾರಯ್ಯ ನಿನ್ನ ಗಂಗೆ’ ಎಂದು ಆ ಭಕ್ತನ ಗಿಂಡಿಯ ನೀರು ಕುಡಿದರು. ಒಮ್ಮೆಗೆ ಭಕ್ತರ ಇಷ್ಟಾರ್ಥ ಗಳು ನೆರವೇರಿದವು.

ಗುರುವಿನ ಅನುಗ್ರಹ

ತಾತ ತನ್ನ ಬಾಯಿ ರುಚಿಗಾಗಿ ತುಮಕೂರು ಚಕ್ಕುಲಿ ಬೇಕೆಂದು ಹೇಳಿರಲಿಲ್ಲ.ಶಿಷ್ಯನ ದೃಢ ಭಕ್ತಿಯನ್ನು ಪರೀಕ್ಷಿಸಲಿಕ್ಕಾಗಿ ಹೇಳಿದ್ದರು. ಇಂದು ತಾತನವರ ಮನಸ್ಸಿಗೆ ಸಂತೋಷವಾಯಿತು. ‘ಇಲ್ಲಿ ಬಾ, ಎಂದು ಶಿಷ್ಯನ ಮಸ್ತಕದ ಮೇಲೆ ಹಸ್ತವಿಟ್ಟರು. ಆಯಿತು, ಗುರುಕೃಪೆಯಾದ ಮೇಲೆ ಆಗದಿರುವುದು ಲೋಕದಲ್ಲಿ ಯಾವುದೂ ಇಲ್ಲ. ಗುರುಕೃಪೆಯನ್ನು ಹೊತ್ತು ಕೆಲವು ದಿವಸಗಳು ಸನ್ನಿಧಿಯಲ್ಲಿಯೂ ಚೇಳ್ಳಗುರ್ಕಿಗೆ ಸಮೀಪದ ಗ್ರಾಮವಾದ ಚಾಕಬಂಡೆಯಲ್ಲಿಯೂ ಇದ್ದು ಕೊನೆಗೆ ಹಂಪೆಯ ಹೇಮಕೂಟದಲ್ಲಿ ವಾಸವಾಗಿ, ಅನೇಕ ಭಕ್ತರ ಉದ್ದಾರ ಕಾರ್ಯಗಳನ್ನು ಮಾಡಿ ಮಹಾಮಹಿಮರಾಗಿ ಬೆಳಗಿ ಅಲ್ಲಿಯೇ ಸಮಾಧಿಯಾದರು. ಈಗ ಅಲ್ಲಿ ವ್ಯವಸ್ಥಿತವಾದ “ಶಿವರಾಮಧೂತರ ಆಶ್ರಮವಿದೆ”. ಅವರ ಸೇವೆಯಲ್ಲಿ ಪಕ್ವವಾದ ಬಸಪ್ಪನೆಂಬುವವರ ಅಧಿಪತ್ಯದಲ್ಲಿ ಶಿವಾನಂದ ಭಾರತಿ ಎಂಬುವ ಸ್ವಾಮಿಗಳನ್ನು ಆ ಆಶ್ರಮಕ್ಕೆ ತಂದುಕೊಳ್ಳಲಾಯಿತು. ಬಂದ ಭಕ್ತರಿಗೆ ಭಕ್ತಿಯ ನಿವಾಸವಾಗಿ ಆಶ್ರಯ ನೀಡುತ್ತಿದೆ ಆಶ್ರಮ.

ತಾತಯ್ಯನವರ ಉತ್ಸವ:

ಪ್ರತಿವರುಷ ಚೈತ್ರ ಶು|| ಪೌರ್ಣಮಿಯಂದು (ಹಂಪೆಯ ಜಾತ್ರೆ ದಿನ) ತಾತನನ್ನು ಬಂಡಿಯಲ್ಲಿ ಕೂಡಿಸಿ ನೆರದ ಭಕ್ತಜನರು ಸಂತೋಷದಿಂದ ಜಾತ್ರೆಯನ್ನು ಮಾಡುವ ರೂಢಿ ಬೆಳದು ಬಂದಿತ್ತು. ಈ ಉತ್ಸವಕ್ಕೆ ಹೆಚ್ಚಾಗಿ ಆ ಕಾಲದಲ್ಲಿ ಉತ್ತರ ಕರ್ನಾಟಕದ ಜನರೇ ಬಂದು ಉತ್ಸವದಲ್ಲಿ ಭಾಗವಹಿಸುತ್ತಿದ್ದರು. ಈ ಉತ್ಸವವೇನೊ ಪ್ರಾರಂಭದಲ್ಲಿ ಸುಲಭವಾಗಿ ನಡೆಯುತ್ತಿರಲಿಲ್ಲ. ಏಕೆಂದರೆ ಈ ಉತ್ಸವ ತಾತನವರಿಗೆ ಬೇಕಾಗಿರಲಿಲ್ಲ. ಅವರಿಗೆ ಬೇಕಿಲ್ಲವೆಂದು ಭಕ್ತರು ಬಿಡುವಂತೆಯೂ ಇರಲಿಲ್ಲ. ಬಂಡಿಯ ಮೇಲೆ ಉದ್ದವಾದ ಕಾಗದ ಬಿದಿರಿನಿಂದ ತಯಾರಿಸಿದ ಈ ಪ್ರಭಾವಳಿಯನ್ನು ಎತ್ತಿ ಕೂಡಲು ಎತ್ತರವಾದ ಪೀಠವನ್ನು ಹಾಕಿ , ತಾತನವರನ್ನು ಕರೆಯಲು ಬಂದು ಕಾಯಿ ಒಡೆದು, ಮಂಗಳಾರತಿ ಮಾಡಿ, ‘ಬಾರಪ್ಪಾ ಹೋಗೋಣ ಹೊತ್ತಾಯಿತು’ ಎಂದು ಒಬ್ಬರು ಎಚ್ಚರಿಸಿದರೆ ಮತ್ತೊಬ್ಬರು ‘ತಾತಯ್ಯ ಬಹಳ ಜನ ಕಾದಿದ್ದಾರಪ್ಪ, ಎದ್ದೇಳಪ್ಪ’ ಎಂದಾಗ ಅದೇ ಮಾತು ಅವರ ಜೊತೆಗಿದ್ದವರೊಬ್ಬರು ಆಡುತ್ತಿದ್ದರು. ಅವಸರ ಮಾಡುತ್ತಿದ್ದರು. ಇದಾವುದೂ ತನಗೆ ಸಂಬಂಧವಿಲ್ಲದಂತೆ ಸಮಾಧಾನದಿಂದ ಸುಮ್ಮನಿದ್ದಾಗ, ಅವರಲ್ಲೊಬ್ಬರು’ ಎಲೇ ತಮ್ಮ ಹೀಗೆ ಮೆತ್ತಗೆ ಕರೆದಾಗ ಎಂದು ಎದ್ದು ಬಂದಾರೋ ಈ ತಾತ, ಬಾ,ಬಾ ತೋಳು ಹಿಡಿ ಎತ್ತಿಕೊಂಡು ಹೋಗೋಣ’ ಎಂದಾಗ ನಾಲ್ಕು ಜನ ಧೈರ್ಯಗೊಂಡು ತೋಳುಗೈ ಮೇಲೆ ಎತ್ತಿಬಿಡುತ್ತಿದ್ದರು. ಆಗ ತಾತನವರಿಗೆ ವಿಪರೀತ ಸಿಟ್ಟು. ಆ ಸಿಟ್ಟಿನಿಂದ ಅವರನ್ನು ಏನೂ ಅನ್ನದೆ, ಏನೋ ಬಯ್ಯಲು ಹೋಗಿ ಬಯ್ಯಲಾರದೆ, ಬಾಯಿ ಬಾಯಿ ಬಡಿದುಕೊಳ್ಳುತ್ತ ಅಳುತ್ತಿದ್ದರು. ಅವರೇನು ಬಿಡುತ್ತಿರಲಿಲ್ಲ. ಅವರಿಗೊಂದುಕಡೆ ನಗು. ‘ಯಾಕಳತೀಯಪ್ಪ ಹೆಂಡತಿ ಸತ್ತೋನು ಅತ್ತಂಗೆ. ಕುಂಡ್ರಿಸಿ ಉತ್ಸವ ಮಾಡ್ತೀವಪ್ಪ’ ಎನ್ನುತ್ತ ಎತ್ತಿಕೊಂಡು ಹೋಗಿ ಉತ್ಸವದ ಬಂಡಿಯಲ್ಲಿ ಕೂಡಿಸುತ್ತಿದ್ದರು. ಈ ಕೂಡಿಸುವ ಕಾರ್ಯದಲ್ಲಿ ತಾತನವರೊಂದಿಗೆ ಸಲಿಗೆಯಿಂದ ಇರುತ್ತಿದ್ದ ಜಾನೇರ ಹನುಮಂತಪ್ಪ ಮತ್ತು ಹಂಪಣ್ಣನವರು ಮುಖ್ಯವಾಗಿರುತ್ತಿದ್ದರು.

ತಾತನವರನ್ನು ಕೂಡಿಸಿದ ಮೇಲಾಯಿತು. ಸ್ಥಿರವಾಗಿ ಅಲುಗಾಡದೆ ಕೂತು ಎದುರು ಬಸವಣ್ಣನವರೆಗೂ ಹೋಗಿ ಉತ್ಸವವು ತಿರುಗಿ ಶ್ರೀಮಠಕ್ಕೆ ಬರುವವರೆವಿಗೂ ಸಾಕ್ಷಾತ್ ಶಿವನ ತೇಜೋವಿಲಾಸದಿಂದ ಭಕ್ತರಿಗೆ ಸಂದರ್ಶನಾನುಗ್ರಹ ವೀಯುತ್ತಿದ್ದರು. ಆ ಉತ್ಸವವನ್ನು ನೋಡಿದವರು ಇಂದಿಗೂ ಕೆಲವರಿದ್ದಾರೆ. ಶ್ರೀಮಠವು ಅಭಿವೃದ್ಧಿಗೊಂಡು ಅತ್ಯಂತ ವೈಭವದಿಂದ, ವಿಶೇಷ ಅಲಂಕಾರಗಳಿಂದ, ಇಂದು ನಡೆವ ಉತ್ಸವಗಳನ್ನು ನೋಡುತ್ತಿದ್ದರೂ ಆ ತಾತನವರ ಉತ್ಸವದಂತೆ ಇಲ್ಲವೆಂದು ಹೇಳುತ್ತಾರೆ. ಹೌದು ಅದು ಜೀವಂತ ಉತ್ಸವ. ಇಂದಿನದು ಅದರ ಪ್ರತೀಕೋತ್ಸವ.

ಸಂದೇಹ-ಸಮಾಧಾನ :

ಉರುವಕೊಂಡ ಗವಿಮಠದ ಶ್ರಿ ಚನ್ನಬಸವ ಮಹಾಸ್ವಾಮಿಗಳು ಮಹಾಮಹಿಮರು. ಚೇಳ್ಳಗುರ್ಕಿಗೆ ಅನೇಕ ಸಲ ಬಂದು ಹೋಗುತ್ತಿದ್ದರು. ತಾತನವರ ಮಠದಲ್ಲಿಳಿದು ಪೂಜಾ ಪ್ರಸಾದಗಳನ್ನು ತೆಗೆದುಕೊಂಡಿರಲಿಲ್ಲ . ಆ ಊರಿನ ಭಕ್ತರು ತಮ್ಮ ತಮ್ಮ ಕೋರಿಕೆಗಳನ್ನು ಬಿನ್ನವಿಸಿಕೊಂಡಾಗ ‘ತಾತ ದೊಡ್ಡಾತನಪ್ಪ ನಾವು ಏನೂ ಅನ್ನುವಂತಿಲ್ಲ. ಆದರೆ ಲಿಂಗವಿಲ್ಲದ ಭವಿಯ ಸ್ಥಾನದಲ್ಲಿ ನಾವು ಪೂಜೆ ಮಾಡುವುದು ಹೇಗೆ?’ ಎಂದು ತಮ್ಮ ವೀರಶೈವ ಧರ್ಮದ ಕಟ್ಟಾಚಾರವನ್ನು ಭಕ್ತರ ಮುಂದೆ ಹೇಳಿದಾಗ, ಅವರು ಬಲವಂತಪಡಿಸಲಿಲ್ಲ. ‘ಸ್ವಾಮಿಗಳಿಗೆ ಸಮಾಧಾನವಾಗಲಿಲ್ಲ. ಆ ಗ್ರಾಮದ ಮಠದ ಗಂಗಾಧರಪ್ಪನವರನ್ನು ಹಾಗೂ ಇತರರನ್ನು ಕರೆದುಕೊಂಡು ತಾತನವರ ದರ್ಶನಕ್ಕೆ ಹೋದಾಗ ಬೆಚ್ಚಿ ‘ಲಿಂಗವಿದೆಯಲ್ಲಪ್ಪ’ ನಾವು ಇಲ್ಲವೆಂದುಕೊಂಡಿದ್ದೆವು, ನಾಳೆ ಇಲ್ಲಿ ಶಿವಪೂಜೆ ಮಾಡೋಣ ಎಂದು ಸ್ವಾಮಿಗಳು ಅಂದಾಗ ಆ ಲಿಂಗ ತಮಗೆ ಕಾಣದಿದ್ದರೂ ಸ್ವಾಮಿಗಳಿಗೆ ಮಾತ್ರ ಕಂಡು ಒಪ್ಪಿದರಲ್ಲಾ ಎಂದು ಸಂತೋಷಗೊಂಡರು. ಎರ್ರಿಸ್ವಾಮಿಗಳು ಮೊದಲು ಲಿಂಗವಂತರೇ ಎಂತಲೂ ಪರವಶಸ್ಥಿತಿಯಲ್ಲಿ ಆ ಲಿಂಗ ಉಳಿಯಲಿಲ್ಲವೆಂತಲೂ ಕೆಲವರು ಹೇಳುವುದುಂಟು. ಕೆಲವರಂತು ಕೆಲವು ಕಾಲ ಹಿಂದೆ ತಾತನ ಎದೆಯ ಮೇಲೆ ಲಿಂಗವಿತ್ತೆಂದೂ ತಾವು ನೋಡಿದ್ದೇವೆಂದೂ ಹೇಳಿದ್ದಾರೆ. ಅದರ ಪ್ರತೀಕವಾಗಿ ಅವರ ಎಡಹಸ್ತ ಲಿಂಗಹಸ್ತದಂತೆಯೇ ಸದಾ ಇರುತ್ತಿತ್ತು.

ಕಳೆದ ಲಿಂಗ ಸಿಕ್ಕಿತು:

ಮತ್ತೊಮ್ಮೆ ಕುಡಿತಿನಿಯಿಂದ ಕಾರೇ ಸಿದ್ದರಾಮಪ್ಪ ನವರು ತಾತನವರ ದರ್ಶನಕ್ಕೆ ಬಂದಾಗ ಲಿಂಗವಿಲ್ಲದ ತಾತನವರ ಅಂಗವನ್ನು ನೋಡಿ ‘ಹೇಗಪ್ಪಾ ನಮಸ್ಕಾರ ಮಾಡುವುದು?’ ಎಂದು ಅಂದುಕೊಂಡು ವಂದಿಸದೇ ಬೀಗರಾದ ಹಿರೇಗೌಡರ ಮನೆಗೆ ಹೋದರು. ಆ ಮಾತು ಈ ಮಾತು ಆಯಿತು. ಹೊರಗೆ ಹೋಗಿ ಬಂದರು. ಊಟದ ಹೊತ್ತೂ ಅಯಿತು. ಲಿಂಗಪೂಜೆಗೆಂದು ಕುಳಿತಾಗ ಲಿಂಗದ ಕರಡಿಗೆಯೇ ಇರಲಿಲ್ಲ. ಆಶ್ಚರ್ಯಗೊಂಡು ಎದೆಯೊಡೆದು ಲಿಂಗದ ಕರಡಿಗೆಯನ್ನು ಎಲ್ಲೆಲ್ಲಿಯೋ ಹುಡುಕಾಡಿದರು ಸಿಕ್ಕಲಿಲ್ಲ. ಲಿಂಗಪೂಜೆಯಾಗದೇ ಉಣ್ಣುವಂತೆಯೂ ಇಲ್ಲ. ನಿಷ್ಠಾಪರರಾದ ಇವರನ್ನು ಬಲ್ಲ ಕೆಲವರು ಹುಡುಕಾಡಿದರು. ಸಿಕ್ಕದಾದಾಗ ಅವರಲ್ಲೊಬ್ಬರು ‘ಏನಯ್ಯ ನೀನು ಬಲೆ ಆಚಾರವಂತ, ತಾತನವರನ್ನು ನೋಡಿದಾಗ ಏನಾದರೂ ಅಂದುಕೊಂಡೆಯಾ?’ ಎಂದು ಕೇಳಿದರು, ‘ಹೌದು ಹೀಗಂದುಕೊಂಡಿದ್ದೆ’ ಎಂದರು ‘ಬುದ್ದಿ ಇಲ್ಲ, ಈಗ ತಾತನವರ ಮೊರೆ ಬೀಳು’ ಎಂದು ಅವರು ಹೇಳಿದರು. ತಪ್ಪಾಯಿತೆಂದು ತಾತನವರಿಗೆ ಅಡ್ಡಬಿದ್ದ. ತಾತ ಏನೂ ಅನ್ನಲಿಲ್ಲ. ಸುಮ್ಮನಿದ್ದರು. ಎದ್ದು ಬಂದು ಈ ಹಿಂದೆ ಹೊರಗಡೆಗೆ ಹೋದ ಹಾದಿಯನ್ನು ಹಿಡಿದು ಹೋದಾಗ ಅಲ್ಲಿ ಬಿದ್ದದ್ದು ಸಿಕ್ಕಿತು. ಈ ಹಿಂದೆ ಅಲ್ಲಿಯೂ ಹುಡುಕಿದ್ದರು. ಆಗ ಕಂಡಿರಲಿಲ್ಲ. ತಾತನವರ ಕೃಪೆಯಿಂದ ಅದೀಗ ಕಂಡಿತು. ಕಾರೆ ಸಿದ್ದರಾಮಪ್ಪನವರಿಗೆ ತಾತನವರೇ ಲಿಂಗಸ್ವರೂಪವಾಗಿ ಕಂಡು ಅವರ ಪರಮಭಕ್ತರಾದರು.

ಮೀಸೆ ಮೇಲೆ ಕೈ ಹಾಕು:

ಪನ್ನಾ ಎಸ್ಟೇಟಿನ ರಾಜರನ್ನು ಗಡೀಪಾರುಮಾಡಿ ಅಂದು ಬ್ರಿಟೀಷರು ಬಳ್ಳಾರಿಯಲ್ಲಿಟ್ಟಿದ್ದರು. ಪನ್ನಾ ರಾಜರೆಂದರೆ ಸ್ಪುರದ್ರೂಪಿಗಳು. ಕ್ಷಾತ್ರ ತೇಜಸ್ಸಿನ ವೀರ ಮಾರ್ತಾಂಡರು. ಕೆಂಪು, ಕಪ್ಪು ಮಿಶ್ರವಾದ ಮೀಸೆ ಗಡ್ಡಗಳು ಎಂಥವರನ್ನೂ ಆಕರ್ಷಿಸುತ್ತಿದ್ದವು. ಅವರ ನಿಲವು ಅಂಗಸೌಷ್ಠವ, ತಲೆಗೆ ಸುತ್ತುತ್ತಿದ್ದ ದೊಡ್ಡಪೇಟ, ನಿಲುವಂಗಿಯ ಠೀವಿ ನೋಡಿದಾಗ ಆ ರಾಜತೇಜಸ್ಸು ಉಕ್ಕುತ್ತಿತ್ತು. ಒಮ್ಮೆ ಚೇಳ್ಳಗುರ್ಕಿಗೆ ತಾತನವರ ಸನ್ನಿಧಿಗೆ ಬಂದು ಸಾಷ್ಟಾಂಗವೆರಗಿ ತನ್ನ ಬಿಡುಗಡೆಯನ್ನು ಕೇಳಿಕೊಂಡಾಗ ತಾತನವರಿಗೂ ಆತನನ್ನು ನೋಡಿ ಹುರಪು ಬಂದಂತಾಗಿ ‘ಮೀಸೆ ಮೇಲೆ ಕೈ ಹಾಕೈಯ್ಯಾ’ ಎಂದು ವಿನೋದವಾಗಿ ನುಡಿದರು. ತಾತನವರ ಅಪ್ಪಣೆಯಂತೆಯೇ ಕೆಲವು ದಿನಗಳಲ್ಲಿಯೇ ಮಹಾರಾಜರು ಬಿಡುಗಡೆ ಹೊಂದಿದರು. ಅವರು ಹೋಗುವಾಗ ತಾತಯ್ಯನವರಿಗೆ ಒಂದು ಪಲ್ಲಕ್ಕಿ, ಮಹಾದ್ವಾರಕ್ಕೆ ಬಾಗಿಲುಗಳನ್ನು ಮಾಡಿಕೊಟ್ಟು ತಾತನವರ ಆಶೀರ್ವಾದವನ್ನು ಪಡೆದುಕೊಂಡರು. ಹೀಗೆ ಬಹಳಷ್ಟು ನಡೆದ ಪವಾಡಗಳು ಇವೆ. ಅವೆಲ್ಲಾ ಇಲ್ಲಿ ಹೇಳಲಾಗಿಲ್ಲ.

ಪವಾಡಗಳು

ಚೇಳ್ಳಗುರ್ಕಿಗೆ ಎರ್ರಿಸ್ವಾಮಿಗಳು ಬರುವ ಮುಂಚಿನ ಮಹಿಮೆಗಳು ಕೆಲವು ಜನ ಹೇಳಿಕೊಳ್ಳುತ್ತಿರುವುದು ನೋಡಿದರೆ, ಇವರು ಕಲ್ಯಾಣದುರ್ಗ, ಬೆಳಗುಪ್ಪೆ, ಮುಷ್ಟೂರು, ಉರವಕೊಂಡ, ವೆಲುಗೊಂಡೆ, ಚೀಕಲಗುರಿಕಿಗಳಲ್ಲಿದ್ದಂತೆಯೂ ಅಲ್ಲಿ ಕೆಲವು ಪವಾಡಗಳಿಂದ ಜನರನ್ನು ಅಚ್ಚರಿಗೊಳಿಸಿದಂತೆಯೂ ತಿಳಿದುಬರುತ್ತದೆ.

ಪೂಜೆಯ ಸಮಯ

ಉದಯ 6 AM to 8 AM
ಸ೦ಜೆ 6 PM to 8 PM

ಫೋಟೋಗಳು

ಸಂಪರ್ಕಿಸಿ

ಟ್ರಸ್ಟ್ ಕಮಿಟಿ

ಶ್ರೀ ಎರ್ರಿಸ್ವಾಮಿ ಜೀವಸಮಾಧಿ,

ಚೇಳ್ಳಗುರ್ಕಿ – 583111

ಬಳ್ಳಾರಿ (ತಾಲ್ಲೂಕು ಮತ್ತು ಜಿಲ್ಲಾ)

   
08392-295401, 94804 75401
   
This email address is being protected from spambots. You need JavaScript enabled to view it.