ಜೀವನ ಚರಿತ್ರೆ

‘’ತಾನೇ ಶಿವನೆಂದು ಕುರುಹತೋರುವ ಹಾಗೆ ಮರ್ತ್ಯದಲ್ಲಿ ಸುಳಿದನಲ್ಲದೆ ಕುರುಹುಂಟೆ ಶರಣರಿಗೆ’’

- ಆದಯ್ಯ

ನೋಡುವವರಿಗೆ ಕುರುಹಾಗಿ, ಅನುಗ್ರಹದ ಗುರುವಾಗಿ, ಕುರುಹಳಿದ ಎರ್ರಿಸ್ವಾಮಿಗಳ ಮಹಿಮಾನ್ವಿತ ಪರವಶ ಜೀವನದ ಅಂಶಗಳನ್ನು ಐತಿಹಾಸಿಕ ದೃಷ್ಟಿಯಿಂದ ವಿವರಿಸುವುದು ಸಾಧ್ಯವಲ್ಲ. ಏಕೆಂದರೆ ಎಲ್ಲರಂತೆ ಅವರಿರಲಿಲ್ಲ. ಅವರಿದ್ದ ರೀತಿಯನ್ನು ಎಲ್ಲರು ಅರಿಯುವಂತಿರಲಿಲ್ಲ. ಆದ್ದರಿಂದ ಲೌಕಿಕ ವರ್ತನೆಯನ್ನು ಕಂಡು ಅಪಹಾಸ್ಯದಿಂದ “ಇವರೊಬ್ಬ ಎರ್ರಿ (ಹುಚ್ಚ) ಸ್ವಾಮಿ’’ ಎಂದು ಕರೆದ ಹುಚ್ಚು ಜನರ ಹೆಸರೇ ಇದುವರೆಗೂ ನಾಡಿನಲ್ಲಿ ಪ್ರಚಲಿತವಾಗಿ ಪ್ರಸಿದ್ಧಿಯಾಗಿದೆ.

ಹೆತ್ತತಾಯಿ ತಂದೆಗಳು, ಹೊತ್ತನಾಡು, ಪಡೆದ ಹೆಸರು, ಹಿಡಿದ ಕುಲಗೋತ್ರ ಇಂದಿಗೂ ತಿಳಿದುಬಂದಿಲ್ಲ. ಅವರನ್ನು ನೋಡಿದವರು, ಅವರ ಸೇವೆಯಲ್ಲಿದ್ದವರು ಇಂದಿಗೂ ಕೆಲವರಿದ್ದಾರೆ. ಆದರೆ ಇವರಾರಿಗೂ ಅವರಾರೆಂಬುದು ತಿಳಿಯದು.

ಪರವಶ ಸ್ಥಿತಿಯ ಎರ್ರಿಸ್ವಾಮಿಗಳ ಗತಿಮತಿಗಳು ವಿಚಿತ್ರವೂ, ಊಹಾತೀತವೂ ಲೌಕಿಕಾನುಭವಕ್ಕೆ ನಿಲುಕಲಾರದವುಗಳೂ ಆಗಿದ್ದವು. ಊಟ,ಉಡುಗೆ,ಮಾಟ, ಕೂಟಗಳ ಅವರ ನಿತ್ಯಜೀವನವು ನೋಡುವ ಕಣ್ಣಿಗೆ ಆಶ್ಚರ್ಯಕರವಾಗಿಯೂ ಅರಿಯುವ ಬುದ್ದಿಗೆ ಮರೆಯಾಗಿಯೂ ನಡೆವ ನಡತೆಗೆ ಜಡವಾಗಿಯೂ ಪ್ರಾಪಂಚಿಕ, ಸಾಮಾಜಿಕ ವೃತ್ತಿಗೆ ವ್ಯತಿರಿಕ್ತವಾಗಿಯೂ ಇದ್ದವು.

ಮಹಾತ್ಮರು ಬಾಲ, ಉನ್ಮತ್ತ, ಪಿಶಾಚಿಗಳ ವರ್ತನೆಯಂತಿರುವರೆಂದು ಹೇಳುವ ಅನುಭವದ ನುಡಿಯು ಎರ್ರಿಸ್ವಾಮಿಗಳಿಗೆ ಸರಿಯಾಗಿ ಅನ್ವಯಿಸಿತ್ತು. ಹಸಿವು ತೃಷೆಗಳ ಅರಿವಿಲ್ಲದೆ, ಮಾನ, ಅವಮಾನ, ಭಯ, ನಾಚಿಕೆಗಳ ಗುರುತಿಲ್ಲದೆ, ಭಾವಬತ್ತಲೆಯ ಕುರುಹೆಂಬಂತೆ, ತನು ಬತ್ತಲೆಯಾಗಿ, ಅರೆಗಣ್ಣಿನ ನೋಟದಿಂದ ಕತ್ತಲು, ಬೆಳಕುಗಳ ಹಂಗಳಿದು ಜನಸಂಗದಲ್ಲಿ ನಿಸ್ಸಂಗಿಯಾಗಿ, ನಿರಂಕುಶನಾಗಿ ತನಗಿಷ್ಟಬಂದಂತೆ ಹುಚ್ಚರೆಂದು ಕರೆದ ಜನರಿಗೆ ಹುಚ್ಚು ಹಿಡಿಸುತ್ತ ಸುಳಿದಾಡಿದರು.

ಇಂತಹ ಸುಳಿದಾಟವನ್ನು ಹುಚ್ಚೆಂದು ಅಪಹಾಸ್ಯಗೈದು, ನಕ್ಕು ಅಲಕ್ಷಿಸುವ ಜನರು ನಮ್ಮ ದೇಶದಲ್ಲಿದ್ದರೂ, ಇಂತಹ ಹುಚ್ಚನಲ್ಲಿಯೇ ಯಾವುದೋ ಅವ್ಯಕ್ತ ಮಹಿಮೆಯು ಅಡಗಿರುತ್ತದೆಂದು ನಂಬಿ, ಆ ಹುಚ್ಚನ ವಿಪರೀತ ಚರ್ಯಗಳನ್ನು ಸಹಿಸಿ ಸೇವೆಯಲ್ಲಿದ್ದು, ಆತನ ಆಶೀರ್ವಾದ ಅನುಗ್ರಹಕ್ಕೆ ಪಾತ್ರರಾಗಿ ಧನ್ಯರಾಗುವ ಭಕ್ತರು ಇದ್ದಾರೆ.

ಶ್ರೀ ರಾಮಕೃಷ್ಣ ಪರಮಹಂಸರನ್ನು ಕಂಡಾಗ, “ಇವನೊಬ್ಬ ಮಾಟಗಾರ, ಹುಚ್ಚ”ನೆಂದು ಬಾಲ್ಯ ಚಾಪಲ್ಯದ ತುಂಟತನದಿಂದ ತಿರಸ್ಕರಿಸಿದ ನರೇಂದ್ರನು ಕಡೆಗೆ ಪರಮಹಂಸರ ಅನುಗ್ರಹದಿಂದ ವಿವೇಕಾನಂದನಾಗಿ ಭಾರತೀಯರ ತತ್ವಶಾಸ್ತ್ರಗಳನ್ನು ವಿದೇಶಗಳಲ್ಲಿ ಹರಡಿದನೆಂಬುದು ನಮ್ಮ ದೇಶದ ಜನಾಂಗದ ಸಹಜ ಚರಿತ್ರೆಯಲ್ಲಿ ಹೆಗ್ಗುರುತಾಗಿದೆ.

12ನೇ ಶತಮಾನದಲ್ಲಿ ಕಲ್ಯಾಣ, 15ನೇ ಶತಮಾನದಲ್ಲಿ ವಿಜಯನಗರ ಶಿವಶರಣರ ಲೀಲಾಮಯ ಚರಿತ್ರೆಗಳಿಗೆ ಆವಾಸಸ್ಥಾನವಾಗಿದ್ದಂತೆ 19ನೇಯ ಶತಮಾನದ ಕೊನೆಗೆ, 20ನೇ ಶತಮಾನದ ಪ್ರಾರಂಭದಲ್ಲಿ ಬಳ್ಳಾರಿ ಪ್ರಾಂತ್ಯವು ಶರಣರ ಲೀಲಾಮಯದ ಆಗರವಾಗಿತ್ತು.

ಬಳ್ಳಾರಿಯ ಶ್ರೀ ಮರ್ರಿಸ್ವಾಮಿಗಳು, ಸಕ್ಕರೆ ಕರಡೆಪ್ಪನವರು, ಕೊಟ್ಟೂರು ಬಸವೇಶ್ವರರು, ಎಮ್ಮಿಗನೂರು ಜಡೆಪ್ಪನವರು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಗಳು, ಗವಿಸಿದ್ದೇಶ್ವರರು, ಗೂಳ್ಯದ ಗಾದಿಲಿಂಗಪ್ಪನವರು, ಆದವಾನಿ ಲಕ್ಷ್ಮಮ್ಮನವರು ಮುಂತಾದ ಮಹಾಮಹಿಮರು ತಮ್ಮ ಲೀಲಾ ವಿನೋದಗಳಿಂದ ನಾಡಿನ ಜನಜೀವನದ ಜಾಗ್ರತಿಗೆ ಅನುಗ್ರಹದ ಶಕ್ತಿಗಳಾಗಿ, ವ್ಯಕ್ತಿಗಳಾಗಿ ಬೆಳಗಿದರು.

ಈ ಸಮಯದಲ್ಲಿಯೇ ಬಳ್ಳಾರಿ ಜಿಲ್ಲೆಯ ಗಡಿಗ್ರಾಮವಾದ ಚೇಳ್ಳಗುರ್ಕಿಗೆ ಶ್ರೀ ಎರ್ರಿಸ್ವಾಮಿಗಳ ಆಗಮನವಾಯಿತು. ಇವರು ಯಾವ ಪ್ರಾಂತದವರೆಂಬುದು ತಿಳಿಯದು. ಆದರೆ ನಮ್ಮ ಪ್ರಾಂತದವರು ಮಾತ್ರ ಅಲ್ಲವೆಂದು ಹೇಳಬಹುದು. ಏಕೆಂದರೆ ನಮ್ಮ ಪ್ರಾಂತದವರೇ ಆಗಿದ್ದ ಪಕ್ಷದಲ್ಲಿ ಕೆಲವು ಮಟ್ಟಿಗಾದರೂ ಇವರ ಪೂರ್ವ ಚರಿತ್ರೆಯನ್ನು ಅರಿಯಲು ಸಾಧ್ಯವಾಗುತ್ತಿತ್ತು.

ಎರ್ರಿಸ್ವಾಮಿಗಳು ಯಾವಾಗಲಾದರೊಮ್ಮೆ ತಮಗೆ ತಾವೇ ಮಾತನಾಡಿಕೊಳ್ಳುತ್ತಿದ್ದ ಕನ್ನಡದ ಶೈಲಿಯಿಂದ ಮೈಸೂರು ನಾಡಿನವರೆಂಬುದು ಊಹಿಸಬರುವಂತಿತ್ತು. ‘ರಂಗಾ ರಂಗಾ’ ಎಂದು ಹೇಳಿಕೊಳ್ಳುತ್ತಿದ್ದು ನುಡಿಯಿಂದ ಈ ರಂಗನು ಆತನ ಅನುಗ್ರಹದ ಗುರುವೋ, ದೈವವೋ ಆಗಿರಬೇಕೆಂದು ಕೆಲವರ ಅಭಿಪ್ರಾಯವಾಗಿದೆ. ಈ ಅಭಿಪ್ರಾಯವನ್ನು ಪುಷ್ಟೀಕರಿಸಲು ಕೆಲವರು ಈತನು ಬ್ರಾಹ್ಮಣನೆಂತಲೂ, ಇನ್ನು ಕೆಲವರು ಲಿಂಗವಂತನೆಂತಲು ಊಹೆಗಳನ್ನು ಕಟ್ಟಿದರು. ಲಿಂಗವಂತನೆಂಬ ಊಹೆಗೆ ರಂಗನು ಮೂಲವಲ್ಲದಿದ್ದರೂ ಅವರು ಕೂತಾಗ ಎಡಹಸ್ತ ಲಿಂಗಹಸ್ತದ ಭಂಗಿಯಲ್ಲಿರುವುದು ನೋಡಿ ಆ ರೀತಿ ಊಹೆಗೆ ಅಸ್ಪದವಿದೆ ಎಂದು ಲಿಂಗವಿಲ್ಲದ ಹಸ್ತವನ್ನು ತಮ್ಮ ವಿಚಾರಕ್ಕೆ ಗುರಿಯಾಗಿಟ್ಟುಕೊಂಡರು. ಯಾರ ವಿಚಾರ, ಯಾವ ಗುರಿ, ಯಾರ ಚರ್ಚೆಗಳಿಗೂ ನಿಲುಕದೆ ನಿಶ್ಚಯಾತ್ಮಕನಾಗಿ ಜಾತಿ-ಮತ, ಪಂಥಗಳ ಚಿನ್ಹೆಗಳಿಲ್ಲದೆ ಎಲ್ಲವು ತಾನಾಗಿ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು ಭಕ್ತಿಯಿಂದ ನೀಡಿದ ಪದಾರ್ಥಗಳನ್ನು ಸೇವಿಸುತ್ತಿದ್ದರು.

ಚೇಳ್ಳಗುರ್ಕಿಗೆ ಎರ್ರಿಸ್ವಾಮಿಗಳು ಬರುವ ಮುಂಚಿನ ಮಹಿಮೆಗಳು ಕೆಲವು ಜನ ಹೇಳಿಕೊಳ್ಳುತ್ತಿರುವುದು ನೋಡಿದರೆ, ಇವರು ಕಲ್ಯಾಣದುರ್ಗ, ಬೆಳಗುಪ್ಪೆ, ಮುಷ್ಟೂರು, ಉರವಕೊಂಡ, ವೆಲುಗೊಂಡೆ, ಚೀಕಲಗುರಿಕಿಗಳಲ್ಲಿದ್ದಂತೆಯೂ ಅಲ್ಲಿ ಕೆಲವು ಪವಾಡಗಳಿಂದ ಜನರನ್ನು ಅಚ್ಚರಿಗೊಳಿಸಿದಂತೆಯೂ ತಿಳಿದುಬರುತ್ತದೆ.

ಒಂದು ಬಾವಿಯಲ್ಲಿ ಮುಳುಗಿ ಮತ್ತೊಂದು ಬಾವಿಯಲ್ಲಿ ತೇಲುವುದು. ಒಂದೇ ಸಮಯದಲ್ಲಿ ಹಲವು ಕಡೆ ಹಲವರೊಂದಿಗಿರುವುದು. ಮಳೆಯಾದಾಗ್ಗೆ ಹಳ್ಳದ ತೆಪ್ಪ(ಕಸಕಡ್ಡಿಗಳು)ದಲ್ಲಿ ಪರವಶನಾಗಿರುವುದು, ಜನರೇನಾದರೂ ಕೇಳಿದರೆ ಅವರಿಗೆ ಇಷ್ಟಬಂದಂತೆ ಆಡಿದ ಮಾತು ಆಗಲೇ ಸತ್ಯವಾಗುವುದು ಇತ್ಯಾದಿ ಪವಾಡಗಳು ಅನೇಕ ನಡೆದಿವೆ. ಆಯಾ ಗ್ರಾಮದವರು ಇಂದಿಗೂ ನೆನೆದುಕೊಳ್ಳುತ್ತಾರೆ.

ಎರ್ರಿಸ್ವಾಮಿಗಳು ಎಲ್ಲಿಗೋ ಹೋಗುತ್ತ ಹಾದಿಯಲ್ಲಿ ಸತ್ತು ಬಿದ್ದಿದ್ದ ಹದ್ದನ್ನು ನೋಡಿ ‘ಎದ್ದು ಹೋಗಯ್ಯ’ ಎಂದಾಗ ಹದ್ದು ಎದ್ದು ಹಾರಿಹೋಯಿತಂತೆ. ಒಬ್ಬ ಭಕ್ತ ಎರ್ರಿತಾತನವರನ್ನು ಒಂದು ಹಾವಿನ ಹುತ್ತದ ಬಳಿ ಕಂಡು ನಮಸ್ಕಾರ ಮಾಡಿದಾಗ, ‘ಕಂಬಳಿಹಾಸಿ ಕಣ್ಣು ಮುಚ್ಚಯ್ಯಾ’ ಎಂದರಂತೆ. ಆ ಭಕ್ತ ಕಣ್ಣುಮುಚ್ಚಿದಾಗ ಆ ಕಂಬಳಿಯಲ್ಲಿ ಹುತ್ತದಲ್ಲಿಯ ಹಾವನ್ನು ಹಾಕಿ ‘ಮೂಟೆ ಕಟ್ಟಿ ಹೊತ್ತುಕೊಳ್ಳಯ್ಯ’ ಎಂದಾಗ ಆ ಭಕ್ತ ಹೊತ್ತುಕೊಂಡ. ‘ಮನೆಯ ದೇವರ ಜಗಲಿಮೇಲಿಟ್ಟು ಪೂಜೆಮಾಡಿ ಬಿಚ್ಚಯ್ಯ’ ಎಂದು ಹೇಳಿಕಳಿಸಿದ ತರುವಾಯ ಭಕ್ತ ಅದರಂತೆ ಮಾಡಲು ಹಾವು ಬಂಗಾರವಾಗಿತ್ತಂತೆ. ಮತ್ತೊಂದು ಊರಲ್ಲಿ (ಮುಷ್ಟೂರು) ಈಶ್ವರನ ಗುಡಿಯಲ್ಲಿಯ ಬಸವಣ್ಣನನ್ನು ನೋಡಿ ‘ಬಾರಯ್ಯ ಬಸವಾ’ ಎಂದು ಕರೆದಾಗ ಆ ಕಲ್ಲು ಬಸವ ಕರೆದ ಕೂಡಲೇ ಸರಿದುಬಂದ.

ಹೀಗೆ ಅನೇಕ ಪವಾಡಗಳಿಂದ ಸುತ್ತಿಸುಳಿದಾಡುತ್ತ ಎಲ್ಲಿಯೂ ನಿಲ್ಲದೆ ಚೇಳ್ಳಗುರ್ಕಿಯ ಮಾರ್ಗವಾಗಿ ಬಂದರು. ಊರಿಗೆ ಎರಡು ಮೈಲು ದಕ್ಷಿಣಕ್ಕಿರುವ ಮಲ್ಲಪ್ಪನ ತಿಪ್ಪೆ ಎಂಬ ಮಟ್ಟಿಯ ಹತ್ತಿರ ಬಂದು ಕೂತಿರಲು, ಊರವರಿಗೆ ಈ ವಿಷಯ ತಿಳಿದು ಊರಿಗೆ ಕರೆತಂದರು. ಚೇಳ್ಳಗುರ್ಕಿಯ ಗ್ರಾಮದವರ ಭಕ್ತಿ ಭಾಗ್ಯವು ದೊಡ್ಡದು. ಎಲ್ಲೆಲ್ಲಿಯೋ ಸಂಚರಿಸಿ ಯಾರ ವಶಕ್ಕೂ ಸಿಲುಕದೆ ಎಲ್ಲಿಯೂ ನಿಲ್ಲದೆ ಚೇಳ್ಳಗುರ್ಕಿಯಲ್ಲಿ ನಿಂತನೆಂದರೆ ಅದು ಆ ನಾಡಿನ ಮತ್ತು ನಮ್ಮೆಲ್ಲರ ಸೌಭಾಗ್ಯ.

1897 ಹೇವಳಂಬಿ ಸಂವತ್ಸರದಲ್ಲಿ ಶ್ರೀ ಎರ್ರಿಸ್ವಾಮಿಗಳು ಚೇಳ್ಳಗುರ್ಕಿಗೆ ಬಂದರೆಂದು ಇಲ್ಲಿಯ ಹಿರಿಯರು ಹೇಳುತ್ತಾರೆ. 1949ರಲ್ಲಿ ಪ್ರಕಟವಾದ ಎರ್ರಿಸ್ವಾಮಿಗಳವರ ಚರಿತ್ರೆಯ ಸಂಪಾದಕರಾದ ಶ್ರೀ.ಕೆ.ಎಂ.ಕರಿಬಸವಶಾಸ್ತ್ರಿಗಳು ಅದೇ ವರ್ಷವನ್ನು ಸಮರ್ಥಿಸಿದ್ದಾರೆ.

ಎರ್ರಿಸ್ವಾಮಿಗಳು ಕೆಲವು ವರ್ಷಗಳು ಊರಲ್ಲಿಯ ಈಶ್ವರನ ಗುಡಿಯಲ್ಲಿಯೂ ಕರೆದವರ ಮನೆಗಳಲ್ಲಿಯೂ ಇರುತ್ತಿದ್ದರು. ಎಲ್ಲಿದ್ದರೂ ತನ್ನಷ್ಟಕ್ಕೆತಾನೆ, ಯಾರ ಇಷ್ಟದಂತೆಯೂ ಇರುತ್ತಿರಲಿಲ್ಲ. ಯಾರಾದರೂ ಉಡಿಸಿದರೆ ಉಡಿಗೆಯುಂಟು, ಇಲ್ಲದಿದ್ದರೆ ದಿಗಂಬರ, ಸಡಲಿದ ಉಡುಗೆಯನ್ನು ಕಟ್ಟಿಕೊಳ್ಳುವುದೂ ಇಲ್ಲ. ಮಂಗಳಕರವಾದ ಕಳೆಗಳು ತನಗೆ ತಾನೆ ಅಂಗಾಂಗಳಲ್ಲಿ ತುಂಬಿಕೊಂಡ ತೇಜೋಮೂರ್ತಿ. ಆತನ ಪರವಶತೆಯಿಂದ ಈ ಕಳೆಗಳು ಎಳ್ಳಷ್ಟು ಕುಗ್ಗಿರಲಿಲ್ಲ. ಎತ್ತರದ ಭವ್ಯಾಕಾರ, ಅಪರಂಜಿಯಂತಹ ಮೈಬಣ್ಣ. ಆ ಬಣ್ಣದಿಂದ ಹೊರಹೊಮ್ಮುವ ದಿವ್ಯ ಬೆಳಕು, ದೊಡ್ಡ ಜಡೆ, ನಿಡಿದಾದ ಗಡ್ಡ, ವಿಶಾಲವಾದ ಹಣೆ, ಹುಲುಸಾಗಿ ಬೆಳೆದ ಹುಬ್ಬುಗಳು, ನೋಡುವವರ ಅಂತರಂಗವನ್ನು ಸೆರೆಹಿಡಿವ ಕಣ್ಣಿನ ದೃಷ್ಟಿ, ಮಾಟವಾದ ಮೂಗು, ಮೀಸೆ ಗಡ್ಡಗಳಲ್ಲಿ ಅಡಗಿ ಕೊಂಚವೇ ಹೊರಗೆ ಕಾಣುವ ಕೆಂದುಟಿಗಳು, ನಿರ್ದೋಷವಾದ ಕೊರಳು, ವಿಶಾಲವಾದ ಎದೆ, ಅಜಾನು ಬಾಹುಗಳು, ಹುರಿದಿರುವಿಕೊಂಡ ಉಗುರು, ಎದ್ದರೂ, ನಿಂತರೂ, ನಡೆದರೂ, ಒರಗಿದರೂ, ಮಲಗಿದರೂ ಆಯಾ ಭಂಗಿಗದೇ ಸುಂದರವಾಗಿ ನೋಡುವವರು ಮನಮೋಹಕವಾಗಿರುವ ಅಸದೃಶರೂಪರಾಶಿಯಾದ ಎರ್ರಿಸ್ವಾಮಿಯು ತನಗೆ ತಾನೇ ಲಕ್ಷವಾಗಿ ಏನೇನೋ ತನ್ನಲ್ಲಿ ತಾನು ಒಟಗುಟ್ಟುತ್ತ ಇರುತ್ತಿದ್ದರು. ಯಾರಾದರೂ ಲವಲವಿಕೆಯಿಂದ ‘ತಾತಾ ನಿಂದು ಯಾವೂರು, ಹೆಸರೇನು?’ ಎಂದು ಕೇಳಿದಾಗ ‘ಕಾಗದ ಪೆನ್ಸಿಲ್ ತಾರಯ್ಯಾ’ ಎಂದು ಕೇಳಿ ತೆಗೆದುಕೊಂಡು ಕನ್ನಡದಲ್ಲಿ ಕಾಗದದ ಮೇಲೆ ಮಹರಾಜರಾಜೇ ಶ್ರೀ ಹಿರಿಯೂರೂ ತಾಲ್ಲೂಕ ತಹಸೀಲ್ದಾರರಿಗೆ.... ಎಂದು ಬರೆದು ಮುಂದೆ ಬರೆಯದೆ ‘ಸಾಕು ಸಾಕು’ ಎಂದು ಸುಮ್ಮನಾಗಿ ಬಿಡುತ್ತಿದ್ದರಂತೆ. ಅಗ ಈ ಹಿರಿಯೂರು ತಹಸೀಲ್ದಾರ, ಇವರ ಕಥೆಯೇನೋ ಕೇಳಿಯೇತಿರಬೇಕೆಂದು ಯಾರೆಷ್ಟು ಬಲವಂತಪಡಿಸಿದರೂ ಮಾತನಾಡುತ್ತಿರಲಿಲ್ಲ. ಈ ವಿಷಯದಿಂದ ಎರ್ರಿತಾತನಿಗೆ ಹಿರಿಯೂರಿನ ಸಂಬಂಧವನ್ನು ಕೂಡಿಸುವುದುಂಟು.

ಒಂದು ಸಲ ಊರಿಗೆ ಕಾಲರ ಬಂತಂತೆ. ಆಗ ತಾತನು ಕಲ್ಲೆಸೆದ ಮನೆಯವರು ಸತ್ತರಂತೆ. ಕಲ್ಲು ತೆಗೆದುಕೊಂಡು ‘ಬೇಡ ಬೇಡಾ’ ಎಂದವರ ಮನೆಯವರು, ಕಾಲರಬಂದರೂ ಬದುಕಿದರಂತೆ. ಗಾಬರಿಯಾದ ಊರವರು ತಾತನನ್ನು ಕೇಳಿದಾಗ, ‘ಇನ್ನೂ ಲೆಖ್ಖ ತಯಾರಾಗಿಲ್ಲಯ್ಯಾ’ ಎಂದು ಬೆರಳುಗಳೆಣಿಸಿ ಒಂದು ಹಸ್ತ ತೋರಿಸಿದರಂತೆ. ಅದರಂತೆ ಐದು ದಿನಗಳಿಗೆ ಕಾಲರ ನಿಂತಿತಂತೆ.

ಮತ್ತೊಂದು ಪವಾಡ ಬಲು ಸೋಜಿಗವಾಗಿದೆ. ಒಬ್ಬ ಭಕ್ತರ ಮನೆಯಲ್ಲಿ ಅಂದು ಎಮ್ಮೆಯ ಕರು ಸತ್ತಿತ್ತು. ಆಗ ಹೊರಗಿನವರು ಯಾರೋ ಎಡೆತಂದಿತ್ತಾಗ (ತಾತನವರು ಆಗ ಅಲ್ಲೇ ಇರುತ್ತಿದ್ದರು) ಮನೆ ಯಜಮಾನಿಯನ್ನು ಕೂಗಿ ‘ಮೊಸರು ತಾರವ್ವ’ ಎಂದರಂತೆ. ಆ ಮುದುಕಿ ಎಮ್ಮೆಯಕರು ಸತ್ತಿದ್ದರಿಂದ ಮೊದಲೇ ದುಃಖಿಸುತ್ತಿದ್ದಾಕೆ ಈ ಮಾತು ಕೇಳಿ ಕೋಪಗೊಂಡು ತನ್ನ ಮಾಮೂಲು ಮಾತಿನಲ್ಲಿ ‘ನಿನ್ಬಾಯಾಗ ಮಣ್ಣಾಕ, ತಿಂದು ಹಲ್ಲತ್ತಿದೆಯಲ್ಲಾ, ಅಲ್ಲಿ ನೋಡು ಕರ ಸತ್ತೈತೆ, ಹೊತ್ತುಕೊಂಡು ಹೋಗಾಕೆ ಮಾದಿಗರು ಬಂದಾರೆ` ಎಂದು ಗದರಿಸಲು ಎರ್ರಿಸ್ವಾಮಿಗಳು ‘ಕಣ್ಣು ಬಿಡಯ್ಯ’ ಎಂದು ಎದ್ದುಬಂದು ಕರುವನ್ನು ಒದೆದು ‘ಏಳಯ್ಯಾ ಏಳು’ ಎಂದ ಕೂಡಲೇ ಕರು ಎದ್ದು ತಾಯಿಯ ಮೊಲೆಯುಂಡಿತು. ಊರವಕೊಂಡೆಯ ಗವಿ ಮಠದ ಕರಿಬಸವಸ್ವಾಮಿಗಳು ದೇಹಾಲಸ್ಯದಿಂದಿರುವಾಗ, ಅವರ ಮಠದವರೊಬ್ಬರು ಬಂದು, ತಾತನ ಮುಂದೆ ಕಾಯಿ ಕರ್ಪೂರವಿಟ್ಟು ಕೈಕಟ್ಟಿಕೊಂಡು ಕೇಳಿದಾಗ,ತಾತನು ಕಾಯಿಯನೆತ್ತಿ ಚೂರು ಚೂರಾಗುವಂತೆ ಗೋಡೆಗೆಸೆದು, ‘ಜಡ್ಜ್ಮೆಂಟ್ ತಯಾರಾಗಿದೆ ಹೋಗಯ್ಯ’ ಎಂದರಂತೆ, ಅದೇ ಹೊತ್ತಿಗೆ ಉರವಕೊಂಡೆಯ ಶ್ರೀಗಳು ಲಿಂಗೈಕ್ಯರಾದರೆಂದು ಹೇಳಲಾಗುತ್ತದೆ.

ಒಮ್ಮೆ ಶ್ರೀಮಂತ ಭಕ್ತರೊಬ್ಬರು ತಮ್ಮ ಬಯಕೆಯು ಈಡೇರಿದ್ದರಿಂದ ತಾನಂದುಕೊಂಡಂತೆ ಬಂಗಾರದ ಕಡಗಗಳನ್ನು ತಾತನ ಕೈಗಳಿಗೆ ತೊಡಿಸಿ ಹೋದರು. (ಇವರು ಹೊಳಗುಂದೆ ಪಂಪನಗೌಡರೆಂದು ಕೆಲವರು, ಚಿಂತಕುಂಟೆ ಹಳೇಗೌಡರೆಂದು ಕೆಲವರು ಹೇಳುತ್ತಿದ್ದಾರೆ). ಮರುದಿನ ಉದಯ ನೋಡಿದಾಗ ಕಡಗಗಳು ಇರಲಿಲ್ಲ. ರಾತ್ರಿ ಯಾರೋ ಅವುಗಳನ್ನು ತಾತನ ಕೈಗಳಿಂದ ಕಿತ್ತುಕೊಂಡು ಹೋಗಿದ್ದರು. ಸಿದ್ದಲಿಂಗಪ್ಪನವರು ಮರುಗಿ, ತಾತನನ್ನು ಪೀಡಿಸಿ ಕೇಳಿದಾಗ ತಾತ ಬೇಸತ್ತು ‘ಹೋಗಯ್ಯ, ಇದ್ದವಕೊಟ್ಟ ಇಲ್ಲದವನೊಯ್ದ’ ಎಂದು ಸುಮ್ಮನಾದ. ಸಾಯಂಕಾಲ ನಾಲ್ಕು ಗಂಟೆಗೊಂದು ಘಟನೆ ಮಠದ ಆವರಣದಲ್ಲಿಯೇ ಎಲ್ಲರ ಸಮಕ್ಷಮ ನಡೆಯಿತು. ಎಲ್ಲಿಯದೋ ಘಟಸರ್ಪವು ಜನರ ಮಧ್ಯದಲ್ಲಿಯೇ ಹೆಡೆ ಎತ್ತಿ ಬುಸುಗುಟ್ಟುತ್ತ ಬಂದು ಆ ಜನರಲ್ಲಿಯ ಒಬ್ಬಾತನ ಮೇಲೆರಗಿತು. ಆತ ಓಡಿದ, ಹಾವು ಆತನ ಬೆನ್ನು ಹತ್ತಿತು. ಸ್ವಲ್ಪ ದೂರದಲ್ಲಿಯೇ ಆತನನ್ನು ಕಚ್ಚಿ ಕಾಣದಂತಾಯಿತು. ತಾತನಲ್ಲಿಗೆ ಆ ಹಾವು ಕಚ್ಚಿದಾತನನ್ನು ಎತ್ತಿಕೊಂಡು ಬರುವವರ ಕೈಯಲ್ಲಿಯೇ ಪ್ರಾಣವು ಹೋಯಿತು. ಸತ್ತಾತನು ಅದೇ ಗ್ರಾಮದವನಾಗಿದ್ದನು.(ಆತನ ಹೆಸರು ಕೂಡ ಹೇಳುತ್ತಾರೆ. ಆ ಹೆಸರು ಇಲ್ಲಿ ಹೇಳುವುದು ಯೋಗ್ಯವಲ್ಲ) ಕಣ್ಣೆದುರಿಗೆ ನಡೆದ ಈ ವಿಷಯದಿಂದ ಸತ್ತವನೇ ಬಂಗಾರದ ಕಡಗ ಕದ್ದಿರಬೇಕೆಂಬ ಊಹೆಗೆ ಆಧಾರ ಸಿಕ್ಕಂತಾಯಿತು. ಆಂದಿನ ಆ ಹಾವು ಶ್ರೀ ಮಠದಲ್ಲಿ ಇಂದಿಗೂ ಇದೆ ಎಂದು, ಯಾವಾಗಲಾದರೊಮ್ಮೆ ಇಲ್ಲಿ ಕೆಲಸ ಮಾಡುವವರಿಗೆ ಕಾಣುತ್ತದೆಂದು ಹೇಳುತ್ತಾರೆ.

ತಾತನು ಊರಲ್ಲಿರುವಾಗ ಒಮ್ಮೆ ಯಾರಿಗೂ ತಿಳಿಯದೆ ಹೊರಟು ಮಲ್ಲಪ್ಪನ ಬೆಟ್ಟದಲ್ಲಿ ಕುಳಿತಿದ್ದ. ತಾತನನ್ನು ಹುಡುಕುತ್ತಾ ಬೆಟ್ಟಕ್ಕೆ ಬಂದಾಗ ಅಲ್ಲಿ ಮಳೆಯಾಗಿತ್ತು. ಆದರೆ ತಾತನು ಕುಳಿತ ಜಾಗದಲ್ಲಿ ಮಾತ್ರ ಮಳೆಯಾಗಿರಲಿಲ್ಲ. ಜಾನೇರ ಹನುಮಂತಪ್ಪ, ಹಂಪಣ್ಣ, ತಾತನ ಸಲಿಗೆಯ ಭಕ್ತರು. ಒಮ್ಮೆಗೇನೆ ತಾತನನ್ನು ತೋಳುಗೈಮೇಲೆ ಎತ್ತಿತಂದರು. ಊಳೂರು ಮಲ್ಲಪ್ಪನ ಹೊಲದ ಹತ್ತಿರ ಬಂದಾಗ ತಾತ ಕೆಳಗಿಳಿದು ನಡೆದು ಬರುತ್ತಾ ‘ಗಂಗೆ ಬಂದಳಯ್ಯಾ’ ಎಂದು ಪದ ಹಾಡುತ್ತ ಊರು ಸೇರಿದ ಕೂಡಲೇ ಮಳೆ ಪ್ರಾರಂಭವಾಯಿತು. ಎಂಟು ದಿನಗಳವರೆಗೂ ಹಿಡಿದ ಮಳೆ ಬಿಡಲಿಲ್ಲ. ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಆ ವರ್ಷ ಹರುಷದಾಯಕವಾಯಿತು.

ಹೀಗೆ ಆಗಾಗ ಕೆಲವು ಪವಾಡಗಳು ಆಗುತ್ತಿರುವಲ್ಲಿ, ಮೊದಲಿದ್ದ ಜನರ ಹುಚ್ಚು ಭಾವನೆಯು ಮಾಯವಾಗುತ್ತ, ಈತನು ಮಹಾತ್ಮನೆಂಬುದು ಜನಜನಿತವಾಗಿ, ಸುತ್ತಮುತ್ತಲ ಗ್ರಾಮದವರು ಬರುವುದು ಹೆಚ್ಚಾಯಿತು. ಆಗ ಊರಲ್ಲಿಯ ಹಜಾಮರ ಭೀಮಪ್ಪನೆಂಬ ಭಕ್ತನು ಬಂದು, ತಾತನನ್ನು ತನ್ನ ಹೊಲದಲ್ಲಿರಿಸಬೇಕೆಂಬ ಬಯಕೆಯಿಂದ ನಮಸ್ಕಾರ ಮಾಡಿದಾಗ, ‘ಜಯಭೇರಿ ಹೊಡಿಸಯ್ಯ’ ಎಂದು ಆತನ ಕೋರಿಕೆಯಂತೆ ಹೊಲದಲ್ಲಿ ಚಿಕ್ಕಮಂಟಪದಲ್ಲಿ ಕೆಲದಿನಗಳು ಕಳೆಯುವಲ್ಲಿ, ಎಲ್ಲಿಂದಲೋ ಒಬ್ಬರು ತಾತನಿರುವಲ್ಲಿಗೆ ಬಂದರು. ಬಂದಾಗ ಇವರು ಮೌನಿಯಾಗಿದ್ದರು. ಇವರ ಇಚ್ಛೆಯಂತೆ ಇರಲು ಭೀಮಪ್ಪನು ಚಿಕ್ಕ ನೆಲಮಾಳಿಗೆಯನ್ನು ಮಾಡಿಸಿಕೊಟ್ಟಿದ್ದನು. ಇದೇ ಸಮಯದಲ್ಲಿ ಬಳ್ಳಾರಿಯ ಗಡಿಗೆ ಪರುಶಪ್ಪನವರು ಕೆಲದಿನವಿದ್ದರು. ಅವಧೂತರ ಬಳಗದಲ್ಲಿ ಇವರೂ ಒಬ್ಬರಾಗಿದ್ದರು. ದೈಹಿಕ ಕ್ರಿಯೆಗಳು ಲೋಕದ ಸಾಮಾಜಿಕ ಕ್ರಿಯೆಗಳಿಗೆ ವಿರುದ್ದವಾಗಿದ್ದುದರಿಂದ, ಇವರ ಅಂತರಂಗಿಕ ಸ್ವಾಭಾವವನ್ನು ಅರಿಯಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ತಾತನೊಂದಿಗೆ ಇವರನ್ನು ಕೂಡಿಸಿ ತೆಗೆದ ಫೋಟೊ ಒಂದಿದೆ.

ಕೆಲದಿನಗಳ ತರುವಾಯ ಗ್ರಾಮದ ಹಿರಿಯರು ಬಂದು, ತಾತನನ್ನು ಬೇಡಿಕೊಂಡು, ಊರಿಗೆ ಕರೆದೊಯ್ದು, ಅವರ ವಾಸಕ್ಕೆ ಪ್ರತ್ಯೇಕವಾದ ಚಿಕ್ಕದೊಂದು ಮನೆಯನ್ನು ಕಟ್ಟಿಸಿಕೊಟ್ಟರು. ನೆಲಮಾಳಿಗೆಯಲ್ಲಿದ್ದವರು ತಾತನೊಂದಿಗೆ ಹೊರಟು, ಸೇವೆಯಲ್ಲಿ ನಿರತರಾಗಿದ್ದರು. ತಾತನಿಗೆ ದೊಡ್ಡದೊಂದು ಮಠವನ್ನು ಕಟ್ಟಿಸಬೇಕೆಂಬ ಅಭಿಪ್ರಾಯವು ಗ್ರಾಮದ ಹಿರಿಯರಲ್ಲಿ ಉಂಟಾದಾಗ, ತಮ್ಮ ಮೌನವನ್ನು ಬಿಟ್ಟು, ಅವರೊಂದಿಗೆ ಮುಖ್ಯರಾಗಿ ಕಾರ್ಯದಲ್ಲಿ ಮುಂದಾದರು.

ಎರ್ರಿಸ್ವಾಮಿಗಳಂತೆ ಇವರು ಯಾವ ಕಡೆಯವರೋ ಕಾಲವೇನೋ ಹೆಸರೇನೋ ಯಾರಿಗೂ ತಿಳಿಯದು. ಆಗಾಗ ಅಲ್ಲಿಯ ಮಠದ ಗಂಗಾಧರಪ್ಪ ಅವರಿಗೆ “ಗಂಗಾಧರಪ್ಪಾ, ನಾನು ಮಠದಯ್ಯನಯ್ಯಾ, ಯಾಕೋ ಏನೋ ಲಿಂಗವನ್ನು ಬಿಟ್ಟೆ” ಎಂದು ಹೇಳುತ್ತಿದ್ದ ವಿಷಯದಿಂದ ಇವರು ಲಿಂಗವಂತರೆಂಬುದು ತಿಳಿಯುತ್ತೆ ಊರು, ಹೆಸರು, ದೆಸೆ ಮಾತ್ರ ತಿಳಿಯದು.

ಎರ್ರಿಸ್ವಾಮಿಗಳನ್ನು ಕರೆದಂತೆ ಇವರನ್ನು ತಿಕ್ಕಯ್ಯನೆಂದು ಕರೆದರು, ಎರ್ರಿ, ತಿಕ್ಕ ಎಂಬ ಶಬ್ದಗಳ ಅರ್ಥ ಒಂದೇ- ಹುಚ್ಚೆಂಬುದು. ಯಾರು ಏನೆಂದು ಕರೆದರೂ ಇವರು ಮಾತ್ರ ತಾವೇನು ಮಾಡಬೇಕೆಂದು ಇಲ್ಲಿಗೆ ಬಂದಿದ್ದರೋ ಆ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದರು. ಇವರು ಎರ್ರಿಸ್ವಾಮಿಗಳಿಗೆ ಸುಂದರವಾದ, ಭವ್ಯವಾದ ಶಿಲಾಮಠವನ್ನು ಗ್ರಾಮದ ಭಕ್ತರ ನೆರವಿನಿಂದ ಇತರ ಗ್ರಾಮದವರ ಸಹಾಯದಿಂದ ನಿರ್ಮಿಸಿದರು. ಈ ಕಾರ್ಯದಲ್ಲಿ ಹೆಚ್ಚಾಗಿ ಸಹಾಯ, ಸಹಕಾರ ನೀಡಿದವರೆಂದರೆ ಕೊಕ್ಕರಚೇಡು ಗ್ರಾಮದ ಈಶ್ವರಪ್ಪನವರು ಮತ್ತು ರಾಯಚೂರಿನ ಚಾವಣಿಗಿ ಫಕ್ಕೀರಪ್ಪನವರು.

ಮಠವನ್ನು ಎಲ್ಲಿ ಕಟ್ಟಬೇಕು? ಎಂಬ ಯೋಚನೆ ಗ್ರಾಮದ ಹಿರಿಯರಲ್ಲಿ ಬಂದು, ಅಕಡೆ ಈಕಡೆ ಸುತ್ತಾಡಿ, ಕೊನೆಗೆ ತಾತನಲ್ಲಿ ಬಂದು ಕೇಳಿದಾಗ, ಊರ ಹೊಕ್ಕರಾಣಿ ಕಟ್ಟಿಸಲು ಕಲ್ಲುಗಳು ಹಾಕಿದ ಜಾಗಕ್ಕೆ ತಾತನು ಬಂದು ನೋಡಿ, ಅಲ್ಲಿಂದ ಈಗ ಮಠ ಕಟ್ಟಿದ ಜಾಗಕ್ಕೆ ಬಂದು, ಮೂತ್ರ ವಿಸರ್ಜನೆ ಮಾಡಿದರು. ಆಗ ಅಲ್ಲೊಂದು ಬೇವಿನ ಗಿಡವಿತ್ತು. ತಾತನು ಏನು ಹೇಳಲಿಲ್ಲ. ಗ್ರಾಮದ ಮಠದಯ್ಯನವರಾದ ಗಂಗಾಧರಪ್ಪನವರು “ಇಲ್ಲಿಯೇ ಮಠ ಕಟ್ಟಿಸಲು ತಾತನ ಇಚ್ಛೆ” ಎಂದು ತಾತನ ಮೂತ್ರ ವಿಸರ್ಜನೆಯ ಸಂಕೇತವನ್ನು ವಿವರಿಸಿದರು. ತಿಕ್ಕಯ್ಯನವರು ಸಮ್ಮತಿಸಿದ್ದರಿಂದ ಗ್ರಾಮದವರು ಮಠದ ನಿರ್ಮಾಣದ ಕಾರ್ಯವನ್ನು ಕೈಕೊಂಡರೆಂದು ಹೇಳಲಾಗುತ್ತದೆ.

ಎರ್ರಿಸ್ವಾಮಿಗಳು ಚೇಳ್ಳಗುರ್ಕಿಗೆ ಬರುವ ಮುಂಚೆಯೇ ಮಹಿಮರಾದ ಬಳಗಾನೂರ ಮರಿಸ್ವಾಮಿಗಳು ಇಲ್ಲಿಗೆ ಬಂದಾಗ, ಈಸ್ಥಳದಲ್ಲಿ ಕಲ್ಲಿನಮೇಲೆ ಕಲ್ಲಿಟ್ಟು “ಇಲ್ಲೊಂದು ದೊಡ್ಡ ಮಠವಾಗುತ್ತದೆ, ಮಹಾಮಹಿಮರೊಬ್ಬರು ಇಲ್ಲಿ ವಾಸವಾಗಿರುತ್ತಾರೆ.” ಎಂದು ಭವಿಷ್ಯ ಹೇಳಿದ್ದರೆಂಬುದನ್ನು ಕೆಲವರು ಹೇಳುತ್ತಾರೆ.

ಮಠದ ನಿರ್ಮಾಣದ ನಂತರ ಎರ್ರಿತಾತನ್ನು ಮಠಕ್ಕೆ ಕರೆತರುವಾಗ ಊರಲ್ಲಿಯ ಯಜಮಾನರಲ್ಲಿ ಭಿನ್ನಾಭಿಪ್ರಾಯವು ತಲೆದೋರಿ ತಾತನು ಈಗಿರುವ ಮನೆಯಲ್ಲೇ ಇರಬೇಕೆಂದು ಕೆಲವರು, ನೂತನ ಮಠದಲ್ಲಿಯೇ ಇರಬೇಕೆಂದು ಕೆಲವರು ವಾದಿಸುವ ವಾದಗಳು ಸರಕಾರದವರೆಗೂ ಹೋದಾಗ, ನೂತನ ಮಠದ ಪಾರ್ಟಿಯು ಎರ್ರಿಸ್ವಾಮಿಗಳ ಹತ್ತಿರ ಬಂದು “ತಾತ ಇದೇನು ಮಾಡಿದೆಯಪ್ಪ” ಎಂದಾಗ “ರಿಜರ್ವ ಬರಲೇಳಯ್ಯ” ಎಂದರಂತೆ. ಕೊನೆಗೆ ಅವರೆಂದಂತೆ ರಿಜರ್ವ್ ಪೊಲೀಸರು ಬಂದು ಉಭಯ ಪಾರ್ಟಿಗಳನ್ನು ಸುಮ್ಮನಿರುವಂತೆ ಹೇಳಿ, ಬಂದ ಪೊಲೀಸು ಅಧಿಕಾರಿಯು ತಾನೇ ಸ್ವತ: ಎರ್ರಿಸ್ವಾಮಿಗಳ ಹತ್ತಿರ ಬಂದು “ಸ್ವಾಮಿ ಇಲ್ಲೇ ಇರುತ್ತೀರಾ? ಅಲ್ಲಿಗೆ ಬರುತ್ತೀರಾ?” ಎಂದು ಕೇಳಿದಾಗ “ನಡೆಯಯ್ಯ ಹೋಗೋಣ” ಎಂದು ಎದ್ದು ಬಂದರು. ಆಗ ಅಭಿಪ್ರಾಯ ಭೇದಗಳನ್ನು ಬಿಟ್ಟು ಊರಿನ ಎಲ್ಲಾ ಭಕ್ತರು ಸೇರಿ ವೈಭವದಿಂದ ಕರೆತಂದು ಮಠದಲ್ಲಿ ಅವರಿಗಾಗಿ ನಿರ್ಮಿಸಿದ ಗದ್ದುಗೆಯಲ್ಲಿ ಕೂಡಿಸಿ ಪೂಜಿಸಿದರು.

ಅಂದಿನಿಂದ ತಾತನವರು ಲಿಂಗೈಕ್ಯರಾಗುವವರೆಗೂ ಅದೇ ಮಠದಲ್ಲಿದ್ದು, ಭಕ್ತರ ಪೂಜೆಗಳನ್ನು ಕೈಗೊಳ್ಳುತ್ತ, ಅವರವರ ಇಷ್ಟಾರ್ಥಗಳನ್ನು ಸಲ್ಲಿಸುತ್ತ, ಇಡೀ ನಾಡಿಗೆ ನಾಡೇ ಭಕ್ತಿಯಿಂದ ಜಾಗ್ರತವಾಯಿತು. ಅವರ ಅನುಗ್ರಹವನ್ನು ಪಡೆಯಲು ಪ್ರತಿದಿನ ಜನರು ಬರುತ್ತಿದ್ದರು. ಬಂದವರಿಗೆ ದಾಸೋಹವು ನಡೆಯುವ ಎರ್ಪಾಟಾಯಿತು. ಎರ್ರಿತಾತನವರ ಸೇವೆಗೆ ಸಿದ್ದಲಿಂಗಪ್ಪನವರು ಕಂಕಣಬದ್ಧರಾಗಿದ್ದರು. ಅತ್ಯಂತ ಕಷ್ಟನಿಷ್ಟೂರಗಳನ್ನು ಸಹಿಸಿ, ಎಲ್ಲ ಭಕ್ತರಲ್ಲಿ ಭಕ್ತಿಯ ವಿಕಾಸಕ್ಕೊಂದು ಮಾರ್ಗವನ್ನು ನಿರ್ಮಿಸಿ, ವ್ಯವಸ್ಥಿತವಾದ ಮಠವನ್ನು ಕಟ್ಟಿಸಿ, ಎಲ್ಲರ ಅನುಗ್ರಹಕ್ಕೆ ಎರ್ರಿತಾತನವರನ್ನು ಮಠದಲ್ಲಿ ತಂದಿರಿಸಿದ ತಿಕ್ಕಯ್ಯನವರಿಗೆ ಇಲ್ಲಿ ಬಹುದಿನವಿದ್ದು ಸೇವಿಸುವ ಭಾಗ್ಯ ಇರಲಿಲ್ಲ. ಇಷ್ಟೆಲ್ಲಾ ವೈಭವದ ಮಠ ಕಟ್ಟಿಸಿಕೊಂಡ ತಾತನಿಗೆ, ಮಠ ಕಟ್ಟಿ ಕೂಡಿಸಿದ ತಿಕ್ಕಯ್ಯನವರ ಬಗ್ಗೆ ಏನೆನಿಸಿತೋ ಏನೋ? ಒಂದು ದಿನ ಇದ್ದಕ್ಕಿದ್ದಂತೆ “ ನೀನು ಹೊರಟು ಹೋಗಯ್ಯ” ಎಂದು ಹೇಳಲು, ತಿಕ್ಕಯ್ಯನವರು ತಕ್ಷಣ ಮಠಬಿಟ್ಟು, ಊರುಬಿಟ್ಟು ಹೊರಟುಹೋದರು. ಏಕೆ? ಎಲ್ಲಿಗೆ? ಎಂಬುದನ್ನು ತಾತ ಕೇಳಲಿಲ್ಲ. ತಿಕ್ಕಯ್ಯನವರು ಹೋಗುವಾಗ “ಹೇಗೆ ಮರಿಯಲೋ ಗುರುವಿನ” ಎಂಬ ಹಾಡನ್ನು ಹೇಳುತ್ತ ಹೋದರೆಂದು ಹೇಳಲಾಗುತ್ತದೆ. ಅಂದು ಹೋದವರು ಎಲ್ಲಿಗೆ ಹೋದರು? ಎಲ್ಲಿದ್ದರು ಎಂಬ ವಿಷಯಗಳು ಯಾರಿಗೂ ಇಂದಿಗೂ ತಿಳಿದುಬಂದಿಲ್ಲ.

ಹೋಗೆಂದು ತಾತನು ಏಕೆ ಹೇಳಿದನೋ ಅದರ ಅಂತರಾರ್ಥವೇನೋ ಹೋಗೆಂದ ಕೂಡಲೆ ತಿಕ್ಕಯ್ಯನು ಬೇರೆ ಮಾತಾಡದೆ ಹೋದ ಕಾರಣವೇನೋ ಯಾರಿಗೂ ತಿಳಿಯದು. ಎರ್ರಿಸ್ವಾಮಿ ಹೋಗೆಂದ, ತಿಕ್ಕಯ್ಯ ಹೋದ ಆ ಎರ್ರಿ, ಆ ತಿಕ್ಕನ ಮರ್ಮವೇನೋ ಅದು ಅವರಿಗೆ ಗೊತ್ತು!.

ಕೊಕ್ಕರಚೇಡಿನ ಈಶ್ವರಪ್ಪನಿಗೆ ಸಂತಾನವಿಲ್ಲದ್ದರಿಂದ ಆಸ್ತಿಯು ತಾತನ ಮಠಕ್ಕೇನೇ ಸಲ್ಲಿಸುವನೆಂದು ಅನುಮಾನಗೊಂಡ ಅವರ ದಾಯದಿಗಳಲ್ಲೊಬ್ಬರು ತಾತನ ಮುಖ್ಯ ಶಿಷ್ಯನಾದ ತಿಕ್ಕಯ್ಯನೇ ಇದಕ್ಕೆಲ್ಲಾ ಕಾರಣನೆಂದು ತಿಕ್ಕಯ್ಯನನ್ನು ಕೊಲ್ಲಿಸುವ ಯತ್ನದಲ್ಲಿ ವಿಫಲನಾಗಿ ದುಷ್ಟಸಂಗಡಿಗರೊಡನೆ ಒಂದು ರಾತ್ರಿ ತಾತನ ಮಠಕ್ಕೆ ಬಂದು ಗದ್ದಲವೆಬ್ಬಿಸಿದ ಘಟನೆಯೇ ತಾತನು ತಿಕ್ಕಯ್ಯನನ್ನು ಹೋಗೆಂದು ಹೇಳಲು ಕಾರಣವೆಂಬುದಾಗಿ ಸಿದ್ದಲಿಂಗಪ್ಪನವರ ತರುವಾಯ ತಾತನ ಸೇವೆಯಲ್ಲಿದ್ದ ಕೆ.ಬಸಯ್ಯನವರು ಹೇಳುತ್ತಿದ್ದರು. ಪ್ರಾಣಾಪಾಯಕ್ಕೆ ಗುರಿಯಾದ ತಿಕ್ಕಯ್ಯನವರ ರಕ್ಷಣೆಗಾಗಿ, ತಾತನೆ ಇಲ್ಲಿಂದ ಹೋಗೆಂದು ಹೇಳಿರಬಹುದೆಂಬುದನ್ನು ನಂಬಬಹುದು.

ಎರ್ರಿಸ್ವಾಮಿಗಳು ಮಠದಲ್ಲಿ ಸುಮಾರು 25 ವರ್ಷಗಳವರೆಗೂ ಇದ್ದು 1922 ದುಂದುಭಿನಾಮ ಸಂವತ್ಸರ ಜೇಷ್ಠ ಶು 4 ರಲ್ಲಿ ಲಿಂಗೈಕ್ಯರಾದರು. ನಾಡಿನ ನಾನಾ ಭಾಗದ ಭಕ್ತರು ದರ್ಶನಾರ್ಥವಾಗಿ ಅವರ ಕಾಯವನ್ನು 3 ದಿನಗಳವರೆಗೂ ಇಟ್ಟಿದ್ದು ತರುವಾಯ ಸಮಾಧಿ ಮಾಡಲಾಯಿತು.

ತಾತನವರು ಲಿಂಗೈಕ್ಯರಾದಾಗ ಅವರಿಗೆ ನೂರು ವರ್ಷಗಳಾಗಿರಬಹುದೆಂದು ಶ್ರೀ ಕೆ.ಎಂ.ಕರಿಬಸವಶಾಸ್ತ್ರಿಗಳು ತಮ್ಮ ಲಾವಣಿಯಲ್ಲಿ ಬರೆದಿದ್ದಾರೆ. ಎರ್ರಿಸ್ವಾಮಿಗಳು ಚೇಳ್ಳಗುರ್ಕಿಗೆ ಬಂದಾಗ ಸುಮಾರು 70 ವರ್ಷಗಳಾದರೂ ಅವರಿಗೆ ಆಗಿರಬೇಕೆಂದು ಊಹಿಸಬಹುದಾಗಿದೆ. ಅಂತು ಅವರು ಸಮಾಧಿಯಾಗುವಾಗ ಅವರ ಶರೀರ ಪಕ್ವವಾದ ಮಾವಿನ ಫಲದಂತಾಗಿತ್ತು.

ಸಮಾಧಿಯಾದ ಸುಮಾರು 12 ವರ್ಷಗಳು ಮಠವು ಒಂದು ರೀತಿಯಲ್ಲಿ ಸುಪ್ತಾವಸ್ಥೆಯಲ್ಲಿದ್ದು, ತರುವಾಯ ನಾನಾ ಮುಖವಾಗಿ ನಾನಾ ಕಡೆಯ ಭಕ್ತರಲ್ಲಿ ಪ್ರೇರಣೆಯಾಗಿ, ಇಂದು ಮಠದ ಪ್ರಗತಿಯು ನೋಡುವವರಿಗೆ ಆಶ್ಚರ್ಯಕರವಾಗಿದೆ. ಸಿದ್ದಲಿಂಗಪ್ಪನವರ ತರುವಾಯ ಮಠದ ವ್ಯವಸ್ಥಾಪಕರಾಗಿ ಬಂದ ಕೆ.ಬಸವಯ್ಯನವರು ತುಂಬಾ ದಕ್ಷತೆಯಿಂದ ಮಠದ ಕಾರ್ಯ ಪ್ರಗತಿಯನ್ನುಂಟುಮಾಡಲು ಮುಂದೆ ಬಂದರು. ಈ ಸಮಯದಲ್ಲಿಯೇ ಚಾನಾಳು ಅಯ್ಯನಗೌಡರು ಸಮಾಧಿಯ ಮೇಲು ಭಾಗದಲ್ಲಿ ತಾತನ ಶಿಲಾ ವಿಗ್ರಹವನ್ನು ಪ್ರತಿಷ್ಠೆ ಮಾಡಿಸಿದರು. ಎಲ್ಲರಲ್ಲಿ ಅಂತ:ಸ್ಪೂರ್ತಿಯಾದ ಶ್ರೀ ಎರ್ರಿತಾತನವರ ಶಕ್ತಿಯು ಹೊರಹೊಮ್ಮಿ, ಮಠವು ನಾನಾಮುಖವಾಗಿ ಬೆಳೆಯುತ್ತ ದೊಡ್ಡದಾಗುತ್ತಿರುವುದಲ್ಲದೆ, ಶ್ರೀ ರಾಮಲಿಂಗಸ್ವಾಮಿಗಳು ಇಲ್ಲಿಗೆ ಬಂದು `ಇದು ಮಹಾಕ್ಷೇತ್ರವಾಗುತ್ತದೆ` ಎಂದು ಹೇಳಿದ ಭವಿಷ್ಯವಾಣಿಯು ನಿಜವಾಗಿದೆ, ಆಗುತ್ತಿದೆ.

ನೆಲದ ಮರೆಯ ನಿಧಾನದಂತೆ, ಎಲೆಯಮರೆಯ ಫಲದಂತೆ ಬೆಂಗಳೂರಿನ ಶ್ರೀ. ಎ.ಜಿ.ಶ್ಯಾಮಣ್ಣನವರು ಈ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗಾಗಿ ತಮ್ಮನ್ನು ತಾವು ಮರೆತು ನಿರಾಡಂಬರವಾಗಿ, ನಿರಹಂಕಾರವಾಗಿ ಸತತ ದುಡಿಯುತ್ತಿದ್ದರು. ಅವರ ಸರ್ವಸ್ವವು ಶ್ರೀ ಎರ್ರಿಸ್ವಾಮಿಗಳೇ ಆಗಿದ್ದರು. ಯಾರೇನೆಂದರೂ ಕೇಳದೆ, ತಮ್ಮ ನಂಬಿಗೆಯೇ ತಾತನೆಂದು, ಮಠದಲ್ಲಿ ಯಾರ ಪ್ರಯತ್ನಕ್ಕೂ ನಿಲುಕದ ನೀರು ಶ್ರೀ ವೈ-ಮಹಾಬಲೇಶ್ವರಪ್ಪನವರಿಗೆ ನಿಲುಕಿ, ಎಲ್ಲರಿಗೂ ದೊರೆಯುವಂತಾದುದು ಎರ್ರಿಸ್ವಾಮಿಗಳ ಅನುಗ್ರಹ ಮತ್ತು ಮಹಾಬಲೇಶ್ವರಪ್ಪನವರ ನಂಬಿಗೆಯ ಭಕ್ತಿಯು ಆಗಿದೆ.

ತಾತನ ಶ್ರೀಮಠದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ ಬೆಂಗಳೂರು ಶ್ಯಾಮಣ್ಣನವರು 24-11-1960 ರಲ್ಲಿ ತಾತನ ಮಠದಲ್ಲಿ ಸಮಾಧಿಯಾದರು.

ತಮ್ಮ ಸರ್ವಸ್ವವನ್ನು ತಾತನ ಮಠಕ್ಕೆ ಅರ್ಪಿಸಿ, ಅವರ ಪ್ರಸಾದ ಸೇವನೆಯಿಂದ ಕೃತಾರ್ಥರಾದ ಉಡೇಗೋಳದ ಮಠದ ಉಮಾಪತಯ್ಯನವರು ಹತ್ತಾರು ವರ್ಷಗಳು ತಾತನ ಮಠದ ಸೇವೆಯಲ್ಲಿದ್ದು, ಪೂರ್ಣಾಯುಷ್ಯವಂತರಾಗಿ, 13-3-1967 ರಲ್ಲಿ ಲಿಂಗೈಕ್ಯರಾದರು. ಅವರ ಸಮಾಧಿ ದಂಡಪಾಣಿ ಬೆಟ್ಟದಲ್ಲಿದೆ.

ಸಿದ್ದಲಿಂಗಪ್ಪನವರ ತರುವಾಯ ಕೆ.ಬಸವಯ್ಯನವರು ಶ್ರೀಮಠದ ಸೇವೆಯಲ್ಲಿದ್ದು, ಕೆಲಕಾಲ ಮಠಬಿಟ್ಟು ಎಲ್ಲೆಲ್ಲೋ ಸಂಚರಿಸಿ, ಕೊನೆಗೆ ರೋಗಗ್ರಸ್ತರಾಗಿ ಮಠಕ್ಕೆ ಸೇರಿ, ಕೆಲವು ವರ್ಷಗಳಿದ್ದು 14-6-1968 ರಲ್ಲಿ ಲಿಂಗೈಕ್ಯರಾದರು. ಇವರ ಸಮಾಧಿಯನ್ನು ದಂಡಪಾಣಿ ಬೆಟ್ಟದಲ್ಲಿ ಮಾಡಲಾಗಿದೆ.

ಮಠದಲ್ಲಿ ಯಾರು ಹೇಳುವರಿಲ್ಲ, ಕೇಳುವರಿಲ್ಲ, ಭಕ್ತರು ಬರುತ್ತಾರೆ.ಎರ್ರಿಸ್ವಾಮಿಗಳ ವಿಗ್ರಹಕ್ಕೆ ನಮಸ್ಕರಿಸುತ್ತಾರೆ. ಅವರೇನು ಕೇಳುತ್ತಾರೋ ಆತನೇನು ಹೇಳುತ್ತಾನೋ ಅವರವರ ಇಷ್ಟಾರ್ಥಗಳುನೆರವೇರಿದಾಗ ತಾವು ಬೇಡಿಕೊಂಡ ಕಾಣಿಕೆಗಳನ್ನು ಪೆಟ್ಟಿಗೆಯಲ್ಲಿಟ್ಟು ಹೋಗುತ್ತಾರೆ. ಇತ್ತೀಚೆಗಂತೂ ಪ್ರತಿ ಅಮವಾಸ್ಯೆಗೆ ಹತ್ತು ಸಾವಿರಕ್ಕೂ ಮೇಲ್ಪಟ್ಟ ಜನಸಂದಣಿ ಸೇರುತ್ತದೆ. ಆ ರಾತ್ರಿ ಮಠದಲ್ಲಿ ನಿದ್ದೆಮಾಡಿ ಹೋಗುವ ವ್ರತವನ್ನು ಅನೇಕರು ಕೈಗೊಂಡಿದ್ದಾರೆ. ಬಂದವರ ವ್ಯವಸ್ಥೆಗಾಗಿ ಮಠದ ಟ್ರಸ್ಟಿನವರು ಯೋಗ್ಯ ರೀತಿಯಿಂದ ಸತ್ಕರಿಸುತ್ತಾರೆ.

ಪ್ರತಿ ವರ್ಷ ಜ್ಯೇಷ್ಠ ಶು|| ಷಷ್ಟಿಯ ದಿನ ಅತ್ಯಂತ ವೈಭವದಿಂದ ತಾತನವರ ಜಾತ್ರೆಯಾಗುತ್ತದೆ. ಇತ್ತೀಚೆಗೆ ಪ್ರತಿಯೊಂದು ಅಮಾವಾಸ್ಯೆಯು ಜಾತ್ರೆಯ ಸ್ವರೂಪವನ್ನು ತಾಳುತ್ತಿದೆ. ಪ್ರತಿ ಬುಧವಾರ ಇಲ್ಲಿ ಶಿವಾನುಭವ ಗೋಷ್ಠಿಯು ಧಾರವಾಡದ ಶ್ರೀಮನ್ನಿರಂಜನ ಪ್ರಣವಸ್ವರೂಪಿ ಮೃತ್ಯುಂಜಯ ಮಹಾಸ್ವಾಮಿಗಳ ಆಶೀರ್ವಾದದಿಂದ ಹತ್ತಾರು ವರ್ಷಗಳು ನಡೆಯುತ್ತ ಬಂದು, ಇತ್ತೀಚೆಗೆ ಅಮವಾಸ್ಯೆಗೊಂದುಸಲ ನಡೆಯುತ್ತಿತ್ತು. ಪ್ರತಿವರ್ಷ ಜಾತ್ರೆಯ ಕಾಲದಲ್ಲಿ ಶಿವಾನುಭವ ಸಮ್ಮೇಳನಗಳು ನಡೆಯುತ್ತವೆ. ಅಲ್ಲದೆ ದಸರಾ ಉತ್ಸವ, ಪುರಾಣ ಶ್ರವಣ, ಕಾರ್ತೀಕ ದೀಪೋತ್ಸವ, ಶಂಖಾಭಿಷೇಕ, ಮುತ್ತಿನ ಪಲ್ಲಕ್ಕಿ ಉತ್ಸವ, ಧನುರ್ಮಾಸ ಪೂಜೆ, ಪ್ರತಿ ಪೌರ್ಣಮಿಯಂದು ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ಪ್ರತಿ ಶ್ರಾವಣದಲ್ಲಿ ತಾತನ ಲೀಲಾಮೃತ ಪುರಾಣ ಶ್ರವಣ ಸಮಾರಂಭವು ವಿಜೃಂಭಣೆಯಿಂದ ನಡೆಯುತ್ತದೆ.

ಪ್ರವಾಸಿಗರು ಬಂದಿಳಿಯಲು ಇಲ್ಲಿ ಅನೇಕ ಆಧುನಿಕ ವ್ಯವಸ್ಥೆಯ ಪ್ರವಾಸಿ ಮಂದಿರಗಳಾಗಿವೆ. ವಿವಾಹ ಮುಂತಾದ ಶುಭ ಕಾರ್ಯಗಳಿಗೆ ಕಲ್ಯಾಣ ಮಂಟಪಗಳು. ಯಾತ್ರಾರ್ಥಿಗಳು ಬರಲು, ಹೋಗಲು ಅನುಕೂಲವಾದ ಬಸ್ಸುಗಳ ಸೌಕರ್ಯಗಳು ಎಲ್ಲರಿಗೂ ನೀರು ದೊರೆಯುವ ಸೌಕರ್ಯ ಮತ್ತು ಎಲೆಕ್ಟ್ರಿಕ್ ದೀಪಗಳ ಅನುಕೂಲತೆಯಾಗಿದೆ. ಅನಂತಪುರದಿಂದ ಬರುವ ಬಸ್ಸುಗಳು, ಬಳ್ಳಾರಿಯಿಂದ ಬರುವ ಬಸ್ಸುಗಳು ದರ್ಶನಾರ್ಥಿಗಳಿಗೆ ಮಠದ ಹತ್ತಿರ ಬಸ್ಸು ನಿಲ್ಲಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡುತ್ತಿದ್ದಾರೆ. ರೈಲಿನಿಂದ ಬರುವ ಯಾತ್ರಿಕರು ವೀರಾಪುರ ಸ್ಟೇಷನ್ನಿಗಿಳಿದರೆ 2 ಮೈಲು ನಡೆದು ಬರಬೇಕು.

ದಿನದಿನವೂ ನೂತನವಾಗಿ, ಸುಂದರವಾಗಿ ಬೆಳೆಯುತ್ತಿರುವ ಮಠವು ಇಂದು ಎಲ್ಲರನ್ನು ಪರಿಣಾಮಕಾರಿಯಾಗಿ ಆಕರ್ಷಿಸುತ್ತಿದೆ. ಮಹಾಪಂಡಿತರಾದ ಲಿಂಗೈಕ್ಯ ಶ್ರೀ ಗೌರಿಶಂಕರಸ್ವಾಮಿಗಳು ದರ್ಶನಕ್ಕೆ ಇಲ್ಲಿಗೆ ಬಂದಾಗ ತಾತನವರ ಸಮಾಧಿಯಲ್ಲಿ ದ್ಯಾನಕ್ಕಾಗಿ ಕೂತಾಗ ಶ್ರೀ ಎರ್ರಿಸ್ವಾಮಿಗಳು ಪ್ರತ್ಯಕ್ಷ ದರ್ಶನವಿತ್ತರಂತೆ. ಶ್ರೀ ಶ್ಯಾಮಣ್ಣನವರ ಕನಸಿನಲ್ಲಿಯೂ ಕೂಡ ತಾತನವರು ಕಂಡು “ ನಾನು ಸಮಾಧಿಯಾಗಿಲ್ಲಯ್ಯ” ಎಂದು ಹೇಳಿದರಂತೆ. ಚೇಳ್ಳಗುರ್ಕಿಯ ಶ್ರೀ ಶಿಖರದಪ್ಪನವರು ಹೇಳುತ್ತಿದ್ದ ಒಂದು ಮಾತು ಇಲ್ಲಿ ನೆನಪಾಗುತ್ತದೆ. ತಾತನವರು ಸಮಾಧಿಯಾದಾಗ ಅವರನ್ನು ಒಳಬಾಗಿಲಿಗೆ ಎತ್ತಿಕೊಂಡು ಹೋದಾಗ ಕೈಕಾಲುಗಳು ಸೆಟೆದುಕೊಂಡಿರದೆ ಪ್ರಾಣವಿರುವವರ ಕೈಕಾಲುಗಳಂತೆ ಅಲುಗಾಡುತ್ತಿದ್ದವಂತೆ. ಒಳಗೆ ಸಮಾಧಿಯಲ್ಲಿ ಕೂಡಿಸಿದಾಗ ಹಣೆಯಲ್ಲಿ ಬೆವರು ಕಾಣಿಸಿ ಕೊಂಡಿತ್ತಂತೆ. ಇದರಿಂದ ಆ ಹೊತ್ತಿನಲ್ಲಿ ಸಮಾಧಿ ಮಾಡುತ್ತಿರವವರಿಗೆ ಅನುಮಾನವು ಬಂತಂತೆ. ಆದರೂ ಕೊನೆಗೆ ಸಮಾಧಿ ಆಯಿತು ಎಂಬ ಅವರ ಮಾತು ಶ್ಯಾಮಣ್ಣನವರ ಕನಸಿಗೆ ಪ್ರಮಾಣವಾಗಿದೆ ಎಂದು ಹೇಳಬಹುದು.

ತಾತನವರ ಮಡಿ ಬಟ್ಟೆಗಳ ಸೇವೆಯಲ್ಲಿದ್ದ ಅಗಸರ ರಾಮಯ್ಯ ಹೇಳುತ್ತಿದ್ದ ಒಂದು ವಿಷಯ ಮರೆಯುವಂತಿಲ್ಲ. ಒಂದು ದಿನ ಮಧ್ಯಾಹ್ನ ಮಠದಲ್ಲಿ ಯಾರೂ ಇಲ್ಲದಾಗ ತಾತನ ಬಳಿಯಲ್ಲಿದ್ದ ತೆಂಗಿನಕಾಯಿ ಬಟ್ಟಲನ್ನು ತೆಗೆದುಕೊಂಡು, ತಂಬಿಗೆಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿ ಅರ್ಧಾಣೆ (ಈಗಿನ ಮೂರು ಪೈಸೆ) ತೆಗೆದುಕೊಂಡು ತಾತ ಮಲಗಿದ್ದಾನೆಂದು ತಿಳಿದು ಅಂಗಡಿಗೆ ಹೋಗಿ ಬೆಲ್ಲವನ್ನು ಕೊಂಡು ಕೊಬ್ಬರಿ ತಿಂದನಂತೆ. ಸಾಯಂಕಾಲ ಮಠಕ್ಕೆ ಹೋದಾಗ ತಾತ “ಏನಯ್ಯಾ , ಅರ್ಧಾಣೆ ತರಲಿಲ್ಲ?” ಎಂದು ಗದರಿ ಕೇಳಿದರಂತೆ. ಅಯ್ಯಾಪ್ಪಾ ! ತಾತನಿಗೆ ತಿಳಿಯದು ಅಂತ ತೆಗೆದುಕೊಂಡು ಹೋಗಿದ್ದೆ, ತಪ್ಪಾಯಿತು. ಎಂದು ಮನೆಗೆ ಹೋಗಿ ಅವರಮ್ಮನನ್ನು ಕಾಡಿ ಒಂದಾಣೆ (ಆರು ಪೈಸೆ) ತಂದು ಆ ತಂಬಿಗೆಯಲ್ಲಿ ಹಾಕಿ “ ಇನ್ನು ಮೇಲೆ ಇಂಗ ಮಾಡಾದಿಲ್ಲಪ್ಪಾ” ಅಂತ ತಾತಗೆ ನಮಸ್ಕಾರ ಮಾಡಿದನಂತೆ. ಚಿನ್ನದ ಕಡಗ ಹೋದಾಗ ಇದ್ದ ವೈರಾಗ್ಯ ಆ ರಾಮಯ್ಯ ಕದ್ದ ಅರ್ಧಾಣೆಯ ಮೇಲೆ ತಾತನಿಗೇಕೆ ಲೋಭವಾಗಿತ್ತೋ? ತನಗೆ ಬೇಕಾದವರ ಶುದ್ಧತೆಗಾಗಿ ಈ ರೀತಿ ಮಾಡಿರಬಹುದೆಂದು ಕಾಣುತ್ತದೆ.

ದಿನದಿನಕ್ಕೆ ಭಕ್ತರಲ್ಲಿ ಪ್ರೇರಣೆಯಾಗುತ್ತಿರುವ ಮಹಾಶಕ್ತಿಯ ಪ್ರಭಾವವನ್ನು ನೋಡಿದರೆ ಅವರಿಲ್ಲವೆಂದು ಹೇಳಲು ಯಾರಿಗೆ ಸಾಧ್ಯ? ಅವರು ಇದ್ದಾರೆಂಬ ನಂಬಿಕೆಯು ದಿನದಿನಕ್ಕೆ ವೃದ್ಧಿಯಾಗುತ್ತಿದೆ. ಆದ್ದರಿಂದ `ಜೀವ ಸಮಾಧಿ` ಎಂಬ ವಿಶ್ವಾಸವು ನೆಲೆಗೊಂಡಿದೆ.

1947 ಮಾರ್ಗಶಿರ ಮಾಸದಲ್ಲಿ ಅಲ್ಲೀಪುರದ ಶ್ರೀ ಮ.ನಿ.ಪ್ರ.ಮಹಾದೇವ ಸ್ವಾಮಿಗಳು ತಾತನ ಮಠಕ್ಕೆ ಬಂದಿದ್ದು, ಸಮಾಧಿಯೊಳಗೆ ಧ್ಯಾನಸ್ಥರಾಗಿ, ತರುವಾಯ ತಾತನೊಂದಿಗೆ ಮಾತಾನಾಡುತ್ತಿದ್ದರೆಂಬ ವಿಷಯವನ್ನು ಅವರೊಂದಿಗೆ ಬಂದಿದ್ದ ಬಳ್ಳಾರಿಯ ಪಾಟೀಲ್ ಶಂಕರಗೌಡರು ಆ ಸಂಭಾಷಣೆಯನ್ನು ಕೇಳಿದೆನೆಂಬುದಾಗಿ, ಆದರೆ ವಿಷಯವೇನೋ ತಿಳಿಯಲಿಲ್ಲವೆಂದು, ಹೇಳಿದ ವಿಷಯವನ್ನು ನಂಬಲು ಇಲ್ಲಿ ಅನೇಕ ರೀತಿಯಿಂದ ಭಕ್ತರ ಉದ್ಧಾರಕ್ಕೆ ನಡೆಯುತ್ತಿರುವ ಮಹಿಮೆಗಳೇ ಸಾಕ್ಷಿಯಾಗಿವೆ.

ಇತ್ತೀಚೆಗೆ ಒಮ್ಮೆ ಉರವಕೊಂಡೆಯಿಂದ ತಮ್ಮ ಕುಟುಂಬದೊಂದಿಗೆ ತಹಸೀಲ್ದಾರರೊಬ್ಬರು ತಾತನ ದರ್ಶನಕ್ಕಾಗಿ ಶ್ರೀಮಠಕ್ಕೆ ಜೀಪಿನಲ್ಲಿ ಬಂದರು. ತಾತನ ದರ್ಶನ ಮಾಡಿಕೊಂಡು ರಾತ್ರಿ ಇಲ್ಲಿ ಪ್ರವಾಸಿ ಮಂದಿರದಲ್ಲಿ ಇದ್ದು, ಮರುದಿನ ದಂಡಪಾಣಿಯ ದರ್ಶನಕ್ಕಾಗಿ ಕುಟುಂಬದೊಂದಿಗೆ ಹೊರಟು ಬೆಟ್ಟ ಹತ್ತುವಾಗ ತಿರುವಿನಲ್ಲಿ ನಲವತ್ತು ಅಡಿಗಳ ಆಳದ ನೀರಿಲ್ಲದ ಸೇದುವ ಬಾವಿಯಲ್ಲಿ ತುಂಬಿದ ಜೀಪು ಜಾರಿಬಿತ್ತು. ಯಾರ ಪ್ರಾಣವು ಉಳಿಯುವ ಸಂಭವವಿಲ್ಲದ ಅಪಘಾತದಲ್ಲಿ ಯಾರಿಗೂ ಕಿಂಚಿತ್ತು ಅಪಾಯವಾಗದೆ ಜೀಪಿನಲ್ಲಿದ್ದವರು ಜಾರದೆ ಸುರಕ್ಷಿತವಾಗಿದ್ದರು. ಜೀಪಿನ ಡ್ರೈವರ್ ಪೀರಾಸಾಹೇಬನು, ಜೀಪು ಕುಣಿಯಲ್ಲಿ ಉರುಳಿದಾಗ, ಯಾರೋ ಒಬ್ಬರು ಬಿಳಿಯ ಗಡ್ಡದಯ್ಯ ಜೀಪನ್ನು ತಡೆದನೆಂದು, ಅದು ಬೀಳದೆ ನಿಂತಾಗ ಕಾಣದಾದರೆಂದು ಹೇಳುವ ಮಾತಿನಿಂದ, ಎರ್ರಿತಾತನೇ ಅಲ್ಲಿ ಪ್ರತ್ಯಕ್ಷವಾಗಿ, ಅವರನ್ನು ರಕ್ಷಿಸಿದನೆಂಬುದು ಯಾರೂ ಅಲ್ಲಗಳೆಯುವಂತಿಲ್ಲ.

ನಾಡಿನ ಎಲ್ಲಾ ಪ್ರಾಂತದವರು ದರ್ಶನಾರ್ಥಿಗಳಾಗಿ ಇಲ್ಲಿಗೆ ಬರುತ್ತಿದ್ದಾರೆ. ಲಿಂಗೈಕ್ಯ ಚಿತ್ರದುರ್ಗದ ಮುರುಘರಾಜೇಂದ್ರ ಜಗದ್ಗುರುಗಳು, ಶ್ರೀ ಸುತ್ತೂರು ಜಗದ್ಗುರುಗಳು, ಧಾರವಾಡದ ಶ್ರೀ ಮ.ನಿ.ಪ್ರ.ಮೃತ್ಯುಂಜಯಸ್ವಾಮಿಗಳು, ಮೈಸೂರು ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜೇಂದ್ರರು, ಮಂತ್ರಿಗಳು, ಉನ್ನತಾಧಿಕಾರಿಗಳು ಮೊದಲಾಗಿ ಎಲ್ಲರನ್ನು ಒಂದಿಲ್ಲೊಂದು ರೀತಿಯಿಂದ ಆಕರ್ಷಿಸುವ ಎರ್ರಿತಾತನ ಮಠವು ದಿವ್ಯಕ್ಷೇತ್ರವಾಗಿದೆ.

ಸಂಗ್ರಹಕಾರರು : ಗಮಕ ಕಲಾನಿಧಿ ಡಾ.ಜೋಳದರಾಶಿ ದೊಡ್ಡನಗೌಡರು

ಸಾಹಿತ್ಯ ಗ್ರಂಥಮಾಲಾ-30

ಕರ್ಣಾಟಕ ಸಂದರ್ಶನ

ಬರೆದವರು:

ಆಸ್ಥಾನ ವಿದ್ವಾನ್, ಪಂಡಿತ ರತ್ನಂ

ಬಿ.ಶಿವಮೂರ್ತಿಶಾಸ್ತ್ರೀ

ವರ್ಷ:1962.

ಮಹಾತ್ಮಚಳ್ಳಕುರಿಕೆಯ ಸ್ವಾಮಿಗಳು(ಪುಟ-356)

ಪರಮೇಶ್ವರನ ಚೈತನ್ಯವು ಒಂದೊಂದು ವಸ್ತುವಿನಲ್ಲಿ ಒಂದೊಂದು ಬಗೆಯಾಗಿ ಅಭಿವ್ಯಕ್ತವಾಗುತ್ತದೆ. ಜ್ಞಾನಿಗಳಾದವರಿಗೆ ಜಗತ್ತಿನಲ್ಲೆಲ್ಲಾ ಪರಮಾತ್ಮನ ಚೈತನ್ಯವು ಕಂಗೊಳಿಸುತ್ತದೆ. “ಸರ್ವಂಖಲ್ವಿದಂಬ್ರಹ್ಮ” ಎಂಬ ಉಪನಿಷನ್ಮಂತ್ರವು ಪರಮೇಶ್ವರನ ಸರ್ವಾಂತರ್ಯಾಮಿತ್ವವನ್ನು ಬೋಧಿಸುತ್ತದೆ. ಆದುದರಿಂದಲೇ ನಿಗಮಾಗಮ ಸಾರಭೂತವಾದ ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣನು ‘ಪಂಡಿತಾಸ್ಸಮದರ್ಶಿನಃ’ ಎಂಬುದಾಗಿ ನಿರೂಪಿಸಿದ್ದಾನೆ. ಅನುಭವಿಗಳು ಪ್ರತಿದಿನದ ತಮ್ಮ ನಡೆನುಡಿಗಳಲ್ಲಿಯೂ, ಈ ತತ್ವವನ್ನು ಮನಗಾಣುತ್ತಾರೆ. ಶ್ರೀ ಶೈಲ ಪರ್ವತಕ್ಕೆ ಹೋದ ಅಕ್ಕಮಹಾದೇವಿಗೆ ವನವೂ, ಆ ವನದೊಳಗಣ ತರುಗಳೂ, ಆ ತರುಗಳಲ್ಲಿ ಆಡುತ್ತಿದ್ದ ಖಗ ಮೃಗಗಳೂ ಶ್ರೀ ಚನ್ನಮಲ್ಲಿಕಾರ್ಜುನನಾಗಿ ಕಾಣಿಸಿದುದು ಈ ತತ್ವಾನುಭವದ ಬಲದಿಂದಲೇ ಅಲ್ಲವೇ?

ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿಯೂ, ಭಗವಂತನ ಚೈತನ್ಯವಿರುವುದಾದರೂ, ಮನುಷ್ಯ ಜೀವಿಯಲ್ಲಿ ಈ ತೇಜಸ್ಸು ಅಧಿಕವಾಗಿ ವಿಕಾಸಗೊಂಡಿದೆ. ಮಾನವರಲ್ಲಿಯೂ ಕಾಮಕ್ರೋಧ ರಹಿತರೂ, ಪರೋಪಕಾರ ಪರಾಯಣರೂ, ಜಿತೇಂದ್ರಿಯರೂ, ಪರಿಶುದ್ಧ ಚರಿತ್ರರೂ, ಭಕ್ತಿಜ್ಞಾನವೈರಾಗ್ಯಸಂಪನ್ನರೂ ಆದ ಮಹಾತ್ಮರಲ್ಲಿ ಈಶ್ವರೀ ಚೈತನ್ಯವು ಅಧಿಕಾಧಿಕವಾಗಿ ಗೋಚರವಾಗುತ್ತದೆ. ಅಂತಹ ಮಹಾತ್ಮರ ಜೀವಿತವು ಸರ್ವವಿಧದಿಂದಲೂ ಜಗತ್ತನ್ನು ಬೆಳಗಿಸಿ ಜನಜೀವನವನ್ನು ಪವಿತ್ರಗೊಳಿಸುತ್ತದೆ.

ಪುಣ್ಯ ಭೂಮಿಯೆನಿಸಿದ ಭರತಖಂಡದಲ್ಲಿಯೂ ತದಂತರ್ಗತವಾದ ನಮ್ಮ ನಲ್ಮೆಯ ಕರ್ಣಾಟಕದಲ್ಲಿಯೂ ಇಂತಹ ಎಷ್ಟೋಮಂದಿ ಸಾಧು ಸತ್ಪುರುಷರು ಆಗಿಹೋಗಿದ್ದಾರೆ. ಅವರೆಲ್ಲರ ತಪ್ಪಸ್ಸಿನ, ಅನುಭವದ,ಆಶಿರ್ವಾದದ ಬಲದಿಂದಲೇ ನಾವುಗಳು ಇನ್ನೂ ಲೋಕದಲ್ಲಿ ನಾಗರಿಕ ಮಾನವರೆಂದು ಪರಿಗಣಿತರಾಗುವ ಸ್ಥಿತಿಯಲ್ಲಿದ್ದೇವೆ. ಅಂತಹ ಮಹಾತ್ಮರ ಚರಿತ್ರೆಯನ್ನು ತಿಳಿಯುವುದು, ಪಠಿಸುವುದು ಪುಣ್ಯಪ್ರದವೇ ಅಲ್ಲದೆ ಪ್ರಯೋಜನಕರವೂ ಆದುದು. ನಮ್ಮ ನಾಡಿನ ಬಳ್ಳಾರಿ ಜಿಲ್ಲೆಯ ಚಳ್ಳುಕುರಿಕೆಯ ಗ್ರಾಮದಲ್ಲಿ ಆಗಿಹೋದ ಒಬ್ಬ ಮಹಾತ್ಮರ ಚರಿತ್ರೆಯನ್ನು ಅತಿ ಸಂಗ್ರಹವಾಗಿ ಇಲ್ಲಿ ಬರೆಯಲಾಗಿದೆ.

ಮಹಾತ್ಮ ಚಳ್ಳಕುರಿಕೆ ಸ್ವಾಮಿಗಳು ಈಗ್ಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಆ ಗ್ರಾಮದಲ್ಲಿ ಶಿವಾಧೀನರಾದರೆಂದು ತಿಳಿದು ಬರುತ್ತದೆ. ಇವರು ಹುಟ್ಟಿದ ದಿವಸ, ಸ್ಥಳ, ತಂದೆ ತಾಯಿಗಳ ಹೆಸರು, ಭೋಧಿಸಿದ ಗುರು ಈ ವಿಷಯಗಳಾವುವೂ ಇದುವರೆಗೆ ಯಾರಿಗೂ ತಿಳಿದುಬಂದಿಲ್ಲ. ಇವರು ಕೇವಲ ವೈರಾಗ್ಯಸಂಪನ್ನರಾಗಿ ತಮ್ಮ ದರ್ಶನಕ್ಕೆ ಬಂದ ಭಕ್ತಕೋಟಿಯನ್ನು ಭೋಧಾಮೃತದಿಂದಲೂ ತಮ್ಮ ಆತ್ಮಬಲದಿಂದಲೂ ,ಅನುಗ್ರಹಿಸುತ್ತಿದ್ದರೆಂದು ತಿಳಿದುಬಂದಿದೆ. ಇವರು ಸಾದಾ ಜಡಭರತನಂತೆ, ದಸರದೇವಯ್ಯನಂತೆ ಇರುತ್ತಿದ್ದರೆಂದು ಹೇಳುತ್ತಾರೆ. ಇವರು ಆನೇಕ ಪವಾಡಗಳನ್ನು ಮಾಡಿದರೆಂದು ಹೇಳುತ್ತಾರೆ. ಇವರ ಮಾಹಾತ್ಮ್ಯವನ್ನು ಕಣ್ಣಾರ ಕಂಡವರು ಈಗಲೂ ಹಲವು ಮಂದಿ ಇದ್ದಾರೆ. ಇವರನ್ನು ಎರ್ರಿಸ್ವಾಮಿ, ಚಳ್ಳಕುರಿಕೆಯ ತಾತ ಮೊದಲಾದ ಹೆಸರುಗಳಿಂದ ಜನರು ಕರೆಯುತ್ತಾರೆ. ಇವರು ಯಾವ ಕುಲ, ಜಾತಿ, ಬೇದಗಳನ್ನೂ ಎಣಿಸದೆ ಎಲ್ಲ ಮತ ಪಂಥದವರಿಂದಲೂ ಅನ್ನಪಾನಗಳನ್ನು ತೆಗೆದುಕೊಳ್ಳತ್ತಿದ್ದರೆಂದು ತಿಳಿದುಬರುತ್ತಿದೆ. ಆದ್ದರಿಂದ ಇವರು ಆರೂಢರಾಗಿದ್ದರೆಂದು ಹೇಳಬಹುದಾಗಿದೆ. ಇವರಿಗೆ ಅಂತ್ಯಕಾಲದಲ್ಲಿ ಸುಮಾರು ನೂರು ವರ್ಷಗಳಾಗಿರಬಹುದಾದರೂ ಅದುವರೆಗೆ ಇವರು ತಮ್ಮ ಚರಿತ್ರೆಯ ಬಗೆಗೆ ಒಬ್ಬರಲ್ಲಿಯೂ ಪ್ರಸ್ತಾಪಿಸದಿರುವುದನ್ನು ನೋಡಿದರೆ ಇವರು ಶ್ರೀ ಮುಪ್ಪಿನ ಷಡಕ್ಷರಿಸ್ವಾಮಿಯಂತೆ ಅಸದೃಶವಾದ ವೈರಾಗ್ಯ ಸಂಪನ್ನರಾಗಿದ್ದರೆಂದು ತೋರುತ್ತದೆ. ಇವರು ಸತ್ತ ಎಮ್ಮೆಯ ಕರುವನ್ನು ಬದುಕಿಸಿದರು, ನದೀ ಪ್ರವಾಹದಲ್ಲಿ ಸಮಾಧಿಸ್ಥರಾಗಿ ಕುಳಿತಿದ್ದರು, ಹಲವರ ರೋಗರುಜಿನಗಳನ್ನು ಹರಿಸಿದರು, ಹಲವರ ಅಭೀಷ್ಟಗಳನ್ನು ಅನುಗ್ರಹಿಸಿದರು ಎಂದು ಮೊದಲಾಗಿಜನರು ಹೇಳಿಕೊಳ್ಳುತ್ತಿರುವ ದಂತ ಕಥೆಗಳು ಅಸಂಖ್ಯಾತವಾಗಿದೆ. ಶ್ರದ್ಧಾ ಪ್ರಧಾನರಾದ ಭಾವಿಕ ಜನರು ಈ ಕಥೆಗಳನ್ನು ವಿಶ್ವಾಸದಿಂದ ನಂಬುತ್ತಾರೆ. ತರ್ಕ ಪ್ರಧಾನವಾದ ಪ್ರಕೃತಿ ನಿಯಮಗಳಿಗೆ ವಿರುದ್ಧವಾದ (Natural Laws) ಕಾರ್ಯಗಳು ನಡೆಯುವುದಿಲ್ಲವೆಂದು ವಾದಿಸುವ ನಾಗರಿಕರಿಗೆ ಇಂತಹ ಪವಾಡಗಳು ಅಪ್ರಿಯವೆಂಬುದನ್ನು ತಿಳಿದು ಇಲ್ಲಿ ಅವನ್ನು ವಿವರಿಸುವ ಗೊಡವೆಗೆ ನಾನು ಹೋಗಲಿಲ್ಲ; ಆದರೂ ಇಂತಹ ಮಹಾತ್ಮರಲ್ಲಿ ಒಂದು ಬಗೆಯ ಪವಿತ್ರತೆ, ಆತ್ಮಪ್ರಭಾವ, ಸಾಮಾನ್ಯ ಮನುಷ್ಯರಿಗಿಂತಲೂ ಮಿಗಿಲಾದ ಶಕ್ತಿ, ತೋರಿಬರುವುದೆಂಬುದನ್ನು ಇಂತಹ ತಾರ್ಕಿಕರಾದರೂ ತಮ್ಮ ಜೀವನದ ಹಲವು ಸಂದರ್ಭಗಳಲ್ಲಿ ಮನಗಾಣಬಹುದು ಉದಾಹರಣೆಗಾಗಿ: ಮಹಾತ್ಮಗಾಂಧಿಯವರ ಕೊರಳಿಗೆ ಹಾಕಿದ ಹೂವಿನ ಹಾರವನ್ನು ಹರಾಜು ಮಾಡಿದಾಗ ಜನರು ನೂರಾರು ರೂಪಾಯಿಗಳನ್ನು ಕೊಟ್ಟು ಕೊಂಡುಕೊಂಡು ಆದರಿಂದ ತಾವು ಪವಿತ್ರರಾದಂತೆ ಭಾವಿಸಿ, ಒಂದು ಬಗೆಯ ಆತ್ಮಶಾಂತಿಯನ್ನು ಹೊಂದಿದ ಲಕ್ಷಗಟ್ಟಲೆ ನಾಗರಿಕರನ್ನು ನಾವು ನೋಡಿದ್ದೇವೆ. ಅಂಗಡಿಯ ಹೂವಿನ ಹಾರವು ಗಾಂಧಿಯವರ ದೇಹಸ್ವರ್ಶನದಿಂದ ಎಷ್ಟೊಂದು ಘನತೆಯನ್ನು ಪಡೆಯಿತೆಂಬುದನ್ನು ನಾವು ಕಣ್ಣಾರ ಕಂಡು ಅಂಗೀಕರಿಸಿದ ಮೇಲೆ, ಪುರಾಣಕಾಲದ ಸತ್ಪುರುಷರ ಚರಿತ್ರೆಗಳಲ್ಲಿ ತೋರಿ ಬರುವ ಪವಾಡಗಳಲ್ಲಿ ಏನೋ ಒಂದು ಬಗೆಯ ತತ್ವಾರ್ಥವೂ ಸ್ವಾರಸ್ಯವೂ ಇರಬಹುದೆಂದು ನಾವು ಊಹಿಸಬಹುದಾಗಿದೆ.

ಶ್ರೀ ಚಳ್ಳಕುರಿಕೆಯ ಸ್ವಾಮಿಗಳ ಚರಿತ್ರೆಯನ್ನು ಐತಿಹಾಸಿಕ ದೃಷ್ಟಿಯಿಂದ ಬರೆಯಲು ನಮಗೆ ಸಾಧನಗಳಿಲ್ಲವಾಗಿದೆ. ಅವರು ಮಾಡಿದ ಬೋಧನೆಗಳನ್ನು ಅವರ ಭಕ್ತರು ಸಂಗ್ರಹಿಸಿ ಬರೆದಿಟ್ಟಿದ್ದರೆ ಅದರಿಂದ ಕನ್ನಡಿಗರಿಗೆ ಮಹೋಪಕಾರವಾಗುತ್ತಿತ್ತು. ನಮ್ಮ ಜನರಲ್ಲಿ ಇನ್ನೂ ಇಂತಹ ಎಚ್ಚರಿಗೆ ಉಂಟಾಗಿಲ್ಲವೆಂದು ಹೇಳಬೇಕಾಗಿದೆ. ಶ್ರೀ ರಾಮಕೃಷ್ಣ ಪರಮ ಹಂಸರ ಚರಿತ್ರೆ ಮತ್ತು ಭೋಧೆಯ ಪರಿಚಯವನ್ನೋದಿದವರಿಗೆ ನಮ್ಮ ಈ ಮಾತಿನ ಅರ್ಥವು ಸುಲಭವಾಗಿ ಹೊಳೆಯುತ್ತದೆ. ಮಹನೀಯರಾದ ಈ ಸ್ವಾಮಿಗಳ ಬಗೆಗೆ ಹಲವು ಮಂದಿ ಪಂಡಿತರೂ, ಕವಿಗಳೂ, ಕವಿತೆಗಳನ್ನೂ ಹಾಡುಗಳನ್ನೂ ಕಟ್ಟಿಹಾಡಿದ್ದಾರೆ. ಅಂತಹ ಹಾಡುಗಳು ಕನ್ನಡನಾಡಿನ ಹಲವೆಡೆಗಳಲ್ಲಿ ಈಗಲೂ ಪ್ರಚಾರದಲ್ಲಿದೆ. ಇವನ್ನು ನಾವು ಕನ್ನಡ ಜನಪದ ಸಾಹಿತ್ಯದಲ್ಲಿಪರಿಗಣಿಸಬಹುದಾಗಿದೆ. ಶ್ರೀಗಳಲ್ಲಿ ಭಕ್ತಿ ಭಾವವನ್ನುಳ್ಳ ಹಲವು ಮಂದಿ ಮಹನೀಯರು ಬೆಂಗಳೂರಿನಲ್ಲಿಯೂ ಇದ್ದಾರೆ. ಈ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ (ಮಕ್ಕಳ ಬಸವಣ್ಣನ ಗುಡಿ) ಶ್ರೀ ಸ್ವಾಮಿಗಳ ಭಾವಚಿತ್ರವನ್ನಿಟ್ಟು ಭಕ್ತಿಯಿಂದ ಪೂಜಿಸುತ್ತಿದ್ದಾರೆ.ಈಗಲೂ ಹಲವರ ಸ್ವಪ್ನದಲ್ಲಿ ಶ್ರೀಗಳು ದರ್ಶನವನ್ನು ಕೊಟ್ಟು ಅವರ ಕೋರಿಕೆಯಂತೆ ಅನುಗ್ರಹಿಸುತ್ತಿರುವರೆಂದು ನಾವು ಕೇಳಿದ್ದೇವೆ. ಜಗತ್ತಿನ ಎಲ್ಲ ಭಾಗದ ಸತ್ಪುರಷರಲ್ಲಿಯೂ ಇಂತಹ ಅನುಭವಗಳು ಗೋಚರ ವಾಗುತ್ತದೆ. ಒಟ್ಟಿನಲ್ಲಿ ಕರ್ಣಾಟಕದಲ್ಲಿ ಆಗಿಹೋದ ಮಹಾತ್ಮರಾದ ಸತ್ಪುರುಷರ ಮಾಲಿಕೆಯಲ್ಲಿ ಶ್ರೀ ಚಳ್ಳಕುರಿಕೆಯ ಸ್ವಾಮಿಗಳು ಪರಿಗಣಿತರಾಗಿದ್ದಾರೆ.

ಬಳ್ಳಾರಿಯ ತಾಲ್ಲೋಕಿನ ಚಳ್ಳಕುರಿಕೆಯ ಗ್ರಾಮದಲ್ಲಿ ಶ್ರೀ ಸ್ವಾಮಿಗಳವರ ಸಮಾಧಿ ಮತ್ತು ಮಠವಿದೆ. ಅದರ ಎಲ್ಲ ಜವಾಬ್ದಾರಿಯೂ ಲಿಂಗವಂತರ ಕೈಯ್ಯಲಿದೆಯೆಂದು ಕೇಳುತ್ತೇವೆ. ಅದು ದಾಸೋಹದ ಮಠವಾಗಿಯೂ, ಒಳ್ಳೆಯ ಕ್ಷೇತ್ರವಾಗಿಯೂ ವಿರಾಜಮಾನವಾಗಿದೆ. ಪ್ರತಿವರ್ಷದ ಜೇಷ್ಠ ಶುದ್ಧ ಷಷ್ಠಿಯ ದಿನ ಶ್ರೀಗಳ ವಾರ್ಷಿಕೋತ್ಸವವಾಗುತ್ತದೆ. ಶ್ರೀ ಸ್ವಾಮಿಗಳ ಮಹಿಮಾಕಾರ್ಯಗಳನ್ನು ತಿಳಿಯಲಿಚ್ಛಿಸುವವರು ಶ್ರೀಮಾನ್ ಬಳ್ಳಾರಿ ಕೆ.ಎಂ. ಕರಿಬಸವಯ್ಯನವರು, 1922ನೆಯ ಇಸವಿಯಲ್ಲಿ ಬರೆದು ಪ್ರಕಟಿಸಿರುವ ಶ್ರೀ ಸ್ವಾಮಿಗಳ ಚರಿತ್ರೆಯನ್ನೋದಿ ಸಮಾಧಾನವನ್ನು ಹೊಂದಬೇಕೆಂದು ನಮ್ಮ ಪ್ರಾರ್ಥನೆ. ಶ್ರೀ ಸ್ವಾಮಿಗಳ ಆತ್ಮಪ್ರಭೆಯು ಕನ್ನಡನಾಡು, ಕನ್ನಡನುಡಿ, ಕನ್ನಡಗರ ಜೀವನ, ಕನ್ನಡದಸಾಹಿತ್ಯ ಮೊದಲಾದವುಗಳನ್ನು ಬೆಳಗುವಂತೆ ಅನುಗ್ರಹಿಸಲೆಂದು ಪುನಃ ಪುನಃ ನಮ್ಮ ಪ್ರಾರ್ಥನೆ.

ಶ್ರೀ. ಎರ್ರಿಸ್ವಾಮಿಗಳ ಆಶ್ರಮ, ಬೆಂಗಳೂರು.

ಶ್ರೀಎರ್ರಿಸ್ವಾಮಿಗಳ ಆಶ್ರಮವು 1959ರಲ್ಲಿ ಬೆಂಗಳೂರಿನ ಸಂಪಂಗಿ ರಾಮನಗರದ ಪಲ್ಲವಿ ಚಿತ್ರಮಂದಿರದ ಹತ್ತಿರ 2 ನೇ ಅಡ್ಡರಸ್ತೆಯಲ್ಲಿ( ಶ್ರೀಎರ್ರಿಸ್ವಾಮಿ ಆಶ್ರಮ ರಸ್ತೆ) ಸ್ಥಾಪಿತವಾಯಿತು. ಶ್ರೀ ಎರ್ರಿಸ್ವಾಮಿಗಳ ಬೆಂಗಳೂರಿನ ಭಕ್ತರಾದ ಶ್ಯಾಮಣ್ಣನವರು ಚೇಳ್ಳಗುರ್ಕಿಗೆ ಬಂದು ಸೇವೆ ಸಲ್ಲಿಸುತ್ತಿರುವಾಗ ಅಡುಗೆಯ ಕಾಯಕವನ್ನು ಮಾಡುತ್ತಿದ್ದ ಲಿಂಗೈಕ್ಯ ಶ್ರೀಮರಿಲಿಂಗಸ್ವಾಮಿಗಳು ಆಶ್ರಮವನ್ನು ಸ್ಥಾಪಿಸಿದರು. ಆಶ್ರಮವು 1993ರಲ್ಲಿ ನವೀಕರಣಗೊಂಡಿತು. ಈಗ ಪೂಜಾ ಕೈಂಕರ್ಯಗಳನ್ನು ಅವರ ಮಗಳಾದ ಸುಜಾತಮ್ಮ, ಅಳಿಯಂದಿರಾದ ಬಸಪ್ಪನವರು ನೆರವೇರಿಸಿಕೊಂಡು ಹೋಗುತ್ತಿದ್ದಾರೆ. ಭಕ್ತರು ದಿನವು ಬಂದು ಪೂಜೆ ಮಾಡಿಸುತ್ತಾರೆ. ಅಮವಾಸ್ಯೆಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿಯನ್ನು ಸಮರ್ಪಿಸುತ್ತಾರೆ. ವರ್ಷಕ್ಕೊಮ್ಮೆ ಚೇಳ್ಳಗುರ್ಕಿಯ ಶ್ರೀ ಎರ್ರಿಸ್ವಾಮಿಗಳ ರಥೋತ್ಸವದ ಹಿಂದಿನ ಭಾನುವಾರ ಶ್ರೀ ಎರ್ರಿಸ್ವಾಮಿಗಳ ಉತ್ಸವ ಮೂರ್ತಿಯನ್ನು ವಿಜೃಂಭಣೆಯಿಂದ, ಸಂಪಂಗಿರಾಮನಗರದ ರಸ್ತೆಯಲ್ಲಿ ಭವ್ಯವಾದ ಮೆರವಣಿಗೆಯಿಂದ ಭಕ್ತರು ತೇರನ್ನು ಎಳೆದು ಧನ್ಯರಾಗುತ್ತಾರೆ. ಗರ್ಭಗುಡಿಯಲ್ಲಿರುವ ಶ್ರೀ ತಾತನ ವಿಗ್ರಹಕ್ಕೆ ಪೂಜೆ ಮಾಡಿ ಹೂಗಳ ಅಲಂಕಾರದಿಂದ ಸಿಂಗರಿಸಿ, ಕರ್ಪೂರದ ಆರತಿಯನ್ನು ಮಾಡಿ, ಜೋಗುಳ ಹಾಡಿ, ಲೀಲೆಗಳನ್ನು ನೆನೆದು , ಪ್ರಸಾದ ಸ್ವೀಕರಿಸಿ, ಭಕ್ತರು ಪುನೀತರಾಗುತ್ತಿದ್ದಾರೆ.

ಈ ಸೇವಾ ಕಾರ್ಯಗಳನ್ನು ಈ ಕೆಳಗಿನ ಟ್ರಸ್ಟಿಗಳು ನೆರವೇರಿಸಿಕೊಂಡು ಹೋಗುತ್ತಿದ್ದಾರೆ.

ಶ್ರೀಯುತರಾದ:-

ಬಿ.ಸಿ.ಬಸವರಾಜ್(ಅಧ್ಯಕ್ಷರು)ಬಿ.ಎನ್.ಶಿವಶಂಕರ್(ಉಪಾಧ್ಯಕ್ಷರು)

ಎಂ.ಓಂಕಾರ್(ಗೌರವಕಾರ್ಯದರ್ಶಿ)ಲೋಕೇಶ್ ಚಂದ್ರ(ಗೌರವ ಖಜಾಂಚಿ)

ಟ್ರಸ್ಟಿ ಸದಸ್ಯರು.

ಕೆ.ಬಿ.ಗೌರೀಶಂಕರ್,ಜಿ.ಸಿ.ಶಶಿಧರ್,ಜಿ.ಸಿ.ಸುರೇಶ್,ಸಿ.ರುದ್ರಪ್ಪ,ಬಿ.ಎಂ.ಮಂಜುನಾಥ್,ಜಿ.ಎಸ್.ಪಂಚಾಕ್ಷರಿ, ಜಿ.ಎಸ್.ಸತ್ಯಮೂರ್ತಿ, ಹೆಚ್.ಬಾಳನಗೌಡ,ಚೇಳ್ಳಗುರ್ಕಿ, ಸಿದ್ದಲಿಂಗನಗೌಡ ಪಾಟೀಲ್, ಚೇಳ್ಳಗುರ್ಕಿ,

ವಿರುಪಾಕ್ಷಗೌಡ ಪಾಟೀಲ್, ಚೇಳ್ಳಗುರ್ಕಿ, ವಿರುಪಾಕ್ಷ ಅರಳಗುಪ್ಪಿ, ಕೆ.ಚೆನ್ನಪ್ಪ, ಚೇಳ್ಳಗುರ್ಕಿ ಹಾಗೂ

ಅಧ್ಯಕ್ಷರು ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘ ಚೇಳ್ಳಗುರ್ಕಿ.

ಕಟ್ಟಡ ನಿರ್ಮಾಣ ಸಮಿತಿ ಸದಸ್ಯರು:- ಕೆ.ಚೆನ್ನಪ್ಪ, ಹೆಚ್.ಬಾಳನಗೌಡ, ಜಿ.ನೂತನಗೌಡ, ಕೆ.ಲಕ್ಷ್ಮಿಕಾಂತ ರೆಡ್ಡಿ,

ವಿರುಪಾಕ್ಷಗೌಡ ಪಾಟೀಲ್, ಸಿದ್ದಲಿಂಗನಗೌಡ ಪಾಟೀಲ್.

ಆಶ್ರಮದ ವಿಳಾಸ:

ಶ್ರೀ ಎರ್ರಿಸ್ವಾಮಿ ಆಶ್ರಮ ಟ್ರಸ್ಟ್ (ರಿ)

2ನೇ ಅಡ್ಡ ರಸ್ತೆ, ಸಂಪಂಗಿರಾಮನಗರ

ಬೆಂಗಳೂರು-560027

ನ್ಯೂಸ್ & ಇವೆಂಟ್ಸ್

ಪವಾಡಗಳು

ಚೇಳ್ಳಗುರ್ಕಿಗೆ ಎರ್ರಿಸ್ವಾಮಿಗಳು ಬರುವ ಮುಂಚಿನ ಮಹಿಮೆಗಳು ಕೆಲವು ಜನ ಹೇಳಿಕೊಳ್ಳುತ್ತಿರುವುದು ನೋಡಿದರೆ, ಇವರು ಕಲ್ಯಾಣದುರ್ಗ, ಬೆಳಗುಪ್ಪೆ, ಮುಷ್ಟೂರು, ಉರವಕೊಂಡ, ವೆಲುಗೊಂಡೆ, ಚೀಕಲಗುರಿಕಿಗಳಲ್ಲಿದ್ದಂತೆಯೂ ಅಲ್ಲಿ ಕೆಲವು ಪವಾಡಗಳಿಂದ ಜನರನ್ನು ಅಚ್ಚರಿಗೊಳಿಸಿದಂತೆಯೂ ತಿಳಿದುಬರುತ್ತದೆ.

ಪೂಜೆಯ ಸಮಯ

ಉದಯ 6 AM to 8 AM
ಸ೦ಜೆ 6 PM to 8 PM

ಫೋಟೋಗಳು

ಸಂಪರ್ಕಿಸಿ

ಟ್ರಸ್ಟ್ ಕಮಿಟಿ

ಶ್ರೀ ಎರ್ರಿಸ್ವಾಮಿ ಜೀವಸಮಾಧಿ,

ಚೇಳ್ಳಗುರ್ಕಿ – 583111

ಬಳ್ಳಾರಿ (ತಾಲ್ಲೂಕು ಮತ್ತು ಜಿಲ್ಲಾ)

   
08392-295401, 94804 75401
   
This email address is being protected from spambots. You need JavaScript enabled to view it.