ಭಕ್ತಿ ಗೀತೆಗಳು

ರಚಯಿತರು: .ಶ್ರೀ ತಿಕ್ಕಯ್ಯಾವಧೂತರು

ಯಾರೇನೆಂದರು:

ಯಾರೇನೆಂದರು ನಿಮಗೆ ಸದ್ಗುರುನಾಥ||ಪ||

ಯಾರೇನೆಂದರು ನಿಮಗೆ ಬಾರದಿರಲೀ ಮನೆಗೆ

ಸಾರಿಸಾರಿಗೆ ನಿಮ್ಮ ದಾರಿ ನೋಡುತಲಿರುವೆ||1||


ಜಾರನೆಂಬುವರೇನೋ ಚೋರನೆಂಬುವರೇನೋ

ಪಾರಮಾರ್ಥದ ಸುವಿಚಾರನೆಂಬುವರೇನೋ||2||


ಆಡಿ ಆಡದಲಿರುವೆ ಮಾಡಿ ಮಾಡದಲಿರುವೆ

ಕೂಡಿ ಕೂಡದಲಿರುವೆ ನೋಡಿ ನೋಡದಲಿರುವೆ ||3||


ಬಾಲನಾಗುತೆ ಶ್ರೀಲೋಲನಾಗುತೆ ಗುಣ

ಶೀಲನಾಗುತೆ ಮುಕ್ತಿ ಕೀಲುತೋರಿದ ಗುರುವೆ ||4||


ವಸುಧೆಯೋಳ್ಚೇಳ್ಗುರ್ಕಿ ಪಸರಿಸಿ ಬೆಳಗಿದ

ಶಶಿಧರ ಎರ್ರಿತಾತ ಶಿಶುವಾನು ಕರುಣಿಸು.ನೀನೇ ಕಾಪಾಡು

ನೀನೇ ಕಾಪಾಡೋ ಗುರುರಾಯ-ನಿಮ್ಮ

ಧ್ಯಾನವು ಮರೆಸುವುದು ಅಜ್ಞಾನದ ಪ್ರಾಯ ||ಪ||ನೀನು ಕೂಡಿರುವಂಥ ಕಾಯ- ಇದ

ನೀನಾಡಿಸಿದಂತೆ ನಾನಾಡುವುದು ನ್ಯಾಯ

ಭಾನುಶತಕೋಟಿ ಸಚ್ಛಾಯ –ಬ್ರಹ್ಮ

ಸ್ಥಾನವು ಹೊಂದದು ಮಾನಸಮಾಯ ||1||


ನಾನಾ ಯೋನಿಗಳಲ್ಲಿ ಬಂದೆ- ಮತಿ

ಹೀನನಾಗಿ ನಾ ಬಹಳ ನೊಂದೆ

ಜ್ಞಾನವು ತಿಳಿಯದು ಮುಂದೆ-ಎನ್ನ

ಮಾನಾಭಿಮಾನವು ನಿನ್ನದು ತಂದೆ ||2||


ಊರಿಗೆ ಹೋಗುತಲಿದ್ದೇ-ಅಲ್ಲಿ

ದಾರಿತಪ್ಪಿ ಘೋರಾರಣ್ಯದಿ ಬಿದ್ದೆ

ಯಾರು ದಿಕ್ಕಲ್ಲವೆಂದಿದ್ದೆ-ಬಂದು

ದಾರಿಯ ತೋರಿದೆ ಕಾರುಣ್ಯನಿಧಿಯೇ ||3||


ವಾದಭೇದಗಳನ್ನು ಮರೆಸೋ-ಭವ

ಬಾಧೆಗಳನ್ನು ಪರಿಹರಿಸೋ

ಸಾಧು ಸಂಗದೊಳೆನ್ನನಿರಿಸೋ

ಶಿವಪಾದಕಮಲದೊಳೆನ್ನ ಬೆರೆಸೋ ||4||

ಧಾತ್ರಿಯೊಳಗೆ ಚೇಳ್ಳಗುರ್ಕಿ ಪುಣ್ಯ

ಕ್ಷೇತ್ರವು ಗಳಿಸಿದೆ ಎರ್ರಿತಾತನ ಹುಡುಕಿ

ಸ್ತೋತ್ರ ಮಾಡುವುದೆಲ್ಲ ಹರಕೆ-ಈ

ಗಾತ್ರವಿರುವತನಕ ತೀರದೀ ಬಯಕೆ ||5||ಗುರುರಾಯ

ಗುರುರಾಯ ಸದ್ಗುರುರಾಯ- ನಿಮ್ಮ

ಚರಣವ ನಂಬಿದೆ ಚಿರಕಾಯಅರಿಯದೆ ಬಂದೆನು ಜನ್ಮಕ್ಕೆ-ನಾ

ಗುರಿಯಾದೆನು ಈ ಕರ್ಮಕ್ಕೆ

ಕರುಣಿಸದಿರುವೆ ಏತಕ್ಕೆ-ನಾ

ಶರಣೆಂದು ನಿಮ್ಮ ಮೊರೆಹೊಕ್ಕೆಗುಂಭದ ಮೋಸಗಾರರನು –ಆ

ಡಂಭಕ ವೇಷದ ಚೋರರನು

ನಂಬದೆ ಬಂದಿಹೆ ನಿನ್ನೆಡೆಗೆ-ನಿನ್ನ

ಹಂಬಲಹಿಡಿಸಿ ಪೊರೆಯನ್ನ


ಎಲ್ಲ ಸಾಧುರೊಳಗಾಡಿದೆನು-ಅವ

ರೆಲ್ಲರ ಚರ್ಯೆಯ ನೋಡಿದೆನು

ಸಲ್ಲದವರ ಬಿಡನಾಡಿದೆನು-ನಿಜ

ಬಲ್ಲಂಥ ಗುರುವಿನ ಕೂಡಿದೆನು ||3||


ಕಡೆಗಾಲಕ್ಕೆ ನೀ ದೊರೆತೆ –ಎನ್ನ

ಕಡೆಯಾಯಿಸು ಕರುಣಾಶರಧಿ

ಪಿಡಿದೆನು ನಿಮ್ಮನ್ನು ದೃಢತರದಿ-ನಾ

ನುಡಿದೆನು ಗುರುನೀ ನುಡಿಸಿದ ತೆರದಿ ||4||


ಕ್ಷಿತಿಯೊಳು ಚೇಳ್ಗುರ್ಕಿ ಪುರವಾಸ-ನಿಜ

ಯತಿಗಳು ಕೂಡವ ಕೈಲಾಸ

ಪ್ರತಿ ಎರ್ರಿತಾತನೇ ಕೊಡುಲೇಸ-ನಿಜ

ಮತಿಯೊಳು ಮರೆಯದೆ ನಿಮ್ಮಧ್ಯಾಸ ||5||ಗುರುಬಂದ

ಗುರುಬಂದ ಗುರುಬಂದ ಗುರುಬಂದ ಮನೆಗೆ

ಗುರು ಎರ್ರಿತಾತನು ತಾ ಬಂದ ಮನೆಗೆ ||ಪ||


ಎಂದೂ ಬಾರದ ಗುರುವು ಇಂದಿಗೆ ಬಂದಾ

ಆನಂದ ಪದವಿಯು ನಿಮಗಾಗಲೆಂದ ||1||


ಕುರುಡರಿಗೆ ಕುಂಟರಿಗೆ ಕಣ್ಣು ಕಾಲ್ಗಳ ತಂದ

ಬರಡು ಗೋವಿನ ಹಾಲು ಕರೆಯುತ್ತ ಬಂದ ||2||


ರನ್ನದ ಹಾವುಗೆ ಚಿನ್ನದ ಜೋಳಿಗೆ

ಪನ್ನಂಗಧರ ಶಿವನು ತಾ ಬಂದ ಮನೆಗೆ ||3||


ಸಾಕ್ಷಾತ್ತಾಗಿ ಗುರುವು ತಾನೆ ಭಿಕ್ಷಕೆ ಬಂದ

ಮೋಕ್ಷವನು ಕೊಡುವಂಥ ತಾತಾ ತಾ ಬಂದ ||5||


ಧರೆಯೊಳು ಚೇಳ್ಗುರ್ಕಿ ಮಂದಿರವ ಮಾಡಿದ

ಅರಿತ ಭಕ್ತರಿಗೆ ವರಗಳ ನೀಡಿದ ||6||


ಬಂದನೆ ಗುರುತಾತ

ಬಂದನೆ ಗುರುತಾತ ನಮ್ಮನೆಗೆ ||ಪ||

ಎಂದಿನ ಸುಕೃತವೊ ಇಂದಿಗೆ ಒದಗಿತು ||ಅ||

ಬಂದನೆ ಅಮೃತವ ತಂದನೆ ಸೇವಿಸು

ಎಂದನೆ ಪರಮಾನಂದದಿ ಭವಹರ||1||

ಅಂದರೆ ಅನಲಿ ನಿಂದೆಯು ಬರಲಿ

ಚೆಂದಾಗಿ ಗುರುಪಾದ ಹೊಂದಿದೆ ಮನದೊಳು ||2||


ತಂದೆ ತಾಯಿ ಗುರು ಬಂಧುಬಳಗ ಗುರು

ಬಂದ ಸಂಕಟ ಸಂದೇಹ ಬಿಡಿಸುವ ||3||


ಮಂದಮತಿಗಳಿಗೆಂದಿಗೆ ದೊರೆಯನು

ಇಂದುಧರ ಕೃಪಾಸಿಂಧುವೆ ಪುರಹರ


ಸುಂದರ ಚೇಳ್ಗುರ್ಕಿ ಮಂದಿರ ಮಾಡಿದ

ನಂಬಿದ ಭಕ್ತರ ಹೊಂದಿದ ಎರ್ರಿತಾತ ||ಪ||


ಹೇಗೆ ಮರೆಯಲೋಹೇಗೆ ಮರೆಯಲೋ ತಾತನ ಹೇಗೆ ಮರೆಯಲೋ ||ಪ||


ಭೋಗವಿಷಯಗಳನು ತ್ಯಜಿಸಿ

ತ್ಯಾಗವರುಹಿದ ಶ್ರೀ ಗುರುವೇ ನಿಮ್ಮ ||ಅ||


ಜ್ಞಾನವೆಂಬೋ ಪರಮಾಮೃತದ

ಪಾನವನ್ನು ಕುಡಿಸಿ ಶರೀರದ

ಮಾನ ಅಭಿಮಾನವನು ಬಿಡಿಸಿ

ಆನಂದದಿ ಮೈ ಮರೆಸಿದ ತಾತನ ||1||


ರಾಗದ್ವೇಷಾದಿ ಗುಣಗಳನೆಲ್ಲ

ನೀಗಿ ನಿರ್ಭೈಲಾದ ಶಿವನ

ಯೋಗವನ್ನು ತಿಳುಹಿ ಭವ

ರೋಗವನ್ನು ಕಳೆದ ಸದ್ಗುರುವಿನ ||2||


ಮಾರುತಾ ಮನ ಮಾತುಗಳನು

ಮೀರಿದಂಥ ಪರಮಾತ್ಮನೊಳು

ಸೇರಿ ಮತ್ತೆ ನರಜನ್ಮಕ್ಕೆ

ಬಾರದಂತೆ ಮಾಡಿದ ತಾತನ ||3||


ದಾಂತಿಯನ್ನು ಹಿಡಿಸಿ ಮಾಯ

ಭ್ರಾಂತಿಯನ್ನು ಬಿಡಿಸಿ ಮುಕ್ತಿ

ಕಾಂತೆಯೆನಗೆ ಮದುವೆಯಮಾಡಿ

ಶಾಂತಿಸುಖದೊಳಿರಿಸಿದ ತಾತನ ||4||


ದಾರುಣಿಯೋಳ್ ಚೇಳ್ಳಗುರ್ಕಿ-ಉ

ದ್ದಾರಮಾಡಿದ ಶ್ರೀ ಎರ್ರಿತಾತ

ಕೋರಿದವರಿಗೆ ಕೊರತೆಯಿಲ್ಲ

ಧೀರತಿಕ್ಕಯ್ಯ ಮಗನೆಬಲ್ಲ.||5||ಸರ್ವಾಂತರ್ಯಾಮಿಎಲ್ಲರೊಳಗಿರ್ದಿಲ್ಲದೇ ಜಗ

ವೆಲ್ಲ ಶೋಧಿಸಿ ಕಾಣ್ವನೆ ||ಪ||


ಎಲ್ಲಿ ನೋಡಲು ಅಲ್ಲಿ ಚಿತ್ಕಳೆ

ಯಲ್ಲಿ ತಾ ಮುಳುಗಾಡ್ವನೆ

ಕಲ್ಲುಮುಳ್ಳೊಳು ಕಾಡುಕಷ್ಠಗಳೆಲ್ಲ

ಬೆಳಕನೆ ಮಾಡ್ವನೆ ! ||1||


ಅಲ್ಲ ಅಹುದದು ಇಲ್ಲ ಉಂಟದು

ಒಲ್ಲೆ ಬೇಕೆಂದು ಕಾಡ್ವನೆ ?

ಬಲ್ಲಜ್ಞಾನಿಯ ಸೊಲ್ಲು ಬೇರಿದೆ

ಖುಲ್ಲ ಜನರಂತೆ ಕಾಣ್ವನೆ ? ||2||


ಮಾರುತಾಮನ ಮಾತುಗಳನು

ಮೀರಿದಾ ಘನಧೀರನೆ

ಮೇರು ಶಿಖರವನೇರಿ ಉನ್ಮನಿ

ಸೇರಿದಾ ಸುಖಸಾರನೆ ||3||


ಸೂರ್ಯನಂತೆ ಸರ್ವಸಾಕ್ಷಿಲಿ

ಕಾರ್ಯಕಾರಣ ಭೂತನೆ

ವೀರ್ಯಜಿತರಿಗೆ ತೂರ್ಯತೋರಿದ

ಆರ್ಯಗುರು ಎರ್ರಿತಾತನೆ ||4||


ದೇಶಕಧಿಕ ಚೇಳ್ಳಗುರ್ಕಿ

ವಾಸಮಾಡಿದ ಈಶನೆ

ದಾಸತಿಕ್ಕಯ್ಯ ಕೂಸಿನೊಳುನಿಧಿ

ಧ್ಯಾಸ ಸುಪ್ರಕಾಶನೆ ||5||


ನಾವು ನರರಲ್ಲ

ನರರಲ್ಲೋ ನಾವು ನರರಲ್ಲ-ಶಿವ

ಶರಣರೆಲ್ಲರು ನೀವು ಕರುಣಿಸಿ ಕೇಳಿರಿ ||ಪ||


ಅರಿವಿಗೆ ಅರಿವಾಗಿ ಮರವೆಗೆ ದೂರಾಗಿ

ಅರಿವು ಮರೆವಿಗೆ ಸಾಕ್ಷಿ ಪರವಸ್ತು ತಾನಾಗಿ||1||


ಅಂಗದಲಿ ಲಿಂಗಾಗಿ ಲಿಂಗದಲಿ ಅಂಗಾಗಿ

ಅಂಗಲಿಂಗ ಸಂಗಸಮರಸದೊಳು ನಿಂದ ||2||


ಬಯಲಿಗೆ ಬಯಲಾಗಿ ಬಯಲು ಬ್ರಹ್ಮವತೋರಿ

ಕೈಲಾಸ ವೈಕುಂಠ ಪರಸ್ಥಲ ಮಾಡಿದ ||3||


ಕಣ್ಣಿದ್ದು ಕುರುಡರು ಕಿವಿಯಿದ್ದು ಕಿವುಡರು

ಕಾಲಿದ್ದು ಕುಂಟರು ಕಾಲಸಂಹರರು ||4||

ಧರೆಯೊಳು ಚೇಳ್ಗುರ್ಕಿ ಗುರು ಎರ್ರಿತಾತನ

ಚರಣವ ನಂಬಿದ ಶರಣಸಂತತಿಗಳು ||5||

ಏನಾರ ಮಾಡಯ್ಯ

ಏನಾರ ಮಾಡಯ್ಯ ನೀನು- ಮಹಾ

ದಾನಿ ಶ್ರೀ ಎರ್ರಿಸ್ವಾಮಿ ನಿನ್ನಾಳು ನಾನು ||ಪ||


ಆಳಿನ ಅಭಿಮಾನ ಅರಸನಿಗೆ – ಭಿಕ್ಷದ

ಜೋಳಿಗೆ ಅಭಿಮಾನ ಕೊಟ್ಟ ಗುರುವಿಗೆ ||1||


ವೀಳ್ಯದ ಅಬಿಮಾನ ಎತ್ತಿದವಂಗೆ- ಕರಿಮಣಿ

ತಾಳಿಯ ಅಭಿಮಾನ ಕಟ್ಟಿದ ಗಂಡನಿಗೆ ||2||

ಎನ್ನ ಕಾಯುವುದು ನಿನ್ನಯ ಬಿರುದು- ನಾ

ನಿನ್ನೆಷ್ಟು ಹೇಳಲಿ ಅಭಿಮಾನ ತೊರೆದು ||3||


ಎನಗೆ ನೀಕೊಟ್ಟ ವರವಿಹುದು- ನೀ

ಬೆನ್ಹತ್ತಿ ಇರುತಿರೆ ನಾ ಧನ್ಯನಹುದು ||4||

ತೂಗಿರಿ ಗುರುವಿನ

ತೂಗಿರಿ ಗುರುವಿನ ತೂಗಿರಿ ಪರಮನ

ತೂಗಿರಿ ನಿರ್ವಾಣ ನಿರ್ಮಲನ-ಶಿವ

ಯೋಗಿಯ ಚರಣಕೆ ಬಾಗಿ ಶಿರವನ್ನು

ನೀಗುವ ಭವದ ರೋಗಂಗಳ ||ಪ||


ಜಾಗರದಿಂದಲಿ ಜೋಗುಳವನೆ ಪಾಡಿ

ಬೇಗನೆ ಭಕ್ತರು ತೂಗಿರಿ ||ಅ||


ಜ್ಯೋತಿಸ್ವರೂಪನ ಜಾತಾವಧೂತನ

ಪ್ರೀತಿಯಿಂದಲಿ ನೀವು ತೂಗಿರಿ

ಪಾತಕಂಗಳನಳಿದು ಖ್ಯಾತನಾದಾತನ

ಭೂತಳಕಧಿಕನ ತೂಗಿರಿ ||1||


ಒಳಹೊರಗೆನ್ನದೆ ಕಳೆಕೋಟಿತೇಜನ

ಒಳಪೊಕ್ಕು ನೋಡಿ ನೀವು ತೂಗಿರಿ

ಇಳಿಯೊಳಗೆ ತಾನು ಬೆಳಗುವ ಮೂರ್ತಿಯ

ತಿಳಿದು ನಿಂತವರೆಲ್ಲ ತೂಗಿರಿ ||2||

ಸನ್ಮಾನದಿ ಗುರುಕೃಪೆಯನ್ನು ಪಡೆದವರು

ಚೆನ್ನಾಗಿ ಪಾಡುತ ತೂಗಿರಿ

ತನ್ಮಯವಾದ ಸದ್ಗುರು ಸಾಧನೆಯೊಳು

ಅನುಮಾನವಿಲ್ಲದೆ ತೂಗಿರಿ ||3||


ಭಕ್ತರ ಬಂಧುವಿನ ಮುಕ್ತಿದಾಯಕನ

ವ್ಯಕ್ತಾನಂದನ ತೂಗಿರಿ

ಭಕ್ತಿಭಾವದಿಂದ ಭರಿತರಾಗಿ ಸುವಿ

ರಕ್ತ ಸದ್ಗುರಿವನ ತೂಗಿರಿ ||4||


ಲೋಕದೆಲ್ಲೆಡೆಯಲ್ಲಿ ಏಕವಾಗಿರುವಂಥ

ಸಾಕಾರಮೂರ್ತಿಯ ತೂಗಿರಿ

ನೂಕಿ ಇಂದ್ರಿಯಗಳ ಜೋಕೆಯಿಂದ ಪೋಗಿ

ಲೋಕೈಕ ಗುರುವಿನ ತೂಗಿರಿ ||5||


ಮುತ್ತು ಮಾಣಿಕ್ಯದ ರತ್ನದ ಪ್ರಭೆಯೊಳು

ಚಿತ್ತ ಶುದ್ದದಿ ನೀವು ತೂಗಿರಿ

ನಿತ್ಯನಾದದೊಳು ನಲಿನಲಿದಾಡುತ್ತ

ಉತ್ತಮರೆಲ್ಲರು ತೂಗಿರಿ ||6||


ಕುಂಡಲಿ ಒಲಿದಂಥ ಪಂಡಿತರೆಲ್ಲರ

ಖಂಡಮೂರುತಿ ಎಂದು ತೂಗಿರಿ

ಮಂಡಲತ್ರಯಮಧ್ಯ ತಂಡತಂಡದಿ ಜ್ವಲಿಪು

ದ್ದಂಡ ಜ್ಯೋತಿಯ ತೂಗಿರಿ ||7||


ಮೇಲುಗಿರಿಯಲ್ಲಿ ಲೀಲೆಯಿಂ ಬೆಳಗುವ

ಬಾಲಬ್ರಹ್ಮನೆಂದು ತೂಗಿರಿ

ಕಾಲನಭಾದೆಯ ಕಡೆಗೆಮಾಡಿದನೆಂದು

ಕುಲದೀಪನಿವನೆಂದು ತೂಗಿರಿ ||8||


ಸುಷುಮ್ಮದ ಬಯಲೊಳು ಸುಳಿವ ಸುದ್ದಿಯ ಕೇಳಿ

ಸಾಹಾಸ್ರದಳದೊಳು ತೂಗಿರಿ

ಸಾಹಸದೊಳು ಕುಂಬಶ್ವಾಸ ಮಾಡಿದರು

ಸೂಸದೆ ಮನದಲ್ಲಿ ತೂಗಿರಿ||9||


ಆರು ಮೂರರ ಮೀರಿ ತುದಿಗೇರಿದವರು

ಧೀರರೆಲ್ಲರು ನೀವು ತೂಗಿರಿ

ಭಾರವು ತಗ್ಗಿಸಿ ಧಾರುಣಿಗೆ ನೀವು

ಬಾರದವರೆಲ್ಲ ತೂಗಿರಿ||10||


ನರಜನ್ಮದಲ್ಲಿ ಬಂದು ಸ್ಥಿರಮುಕ್ತಿಯನು ಪಡೆದು

ವರಪುತ್ರರೆಲ್ಲರು ತೂಗಿರಿ

ಆರದ ಜ್ಯೋತಿಯಲಿ ಬೆರೆತು ಆಡುವರೆಲ್ಲ

ಗುರುಪುತ್ರರೊಂದಾಗಿ ತೂಗಿರಿ ||11||


ಯತಿಸಿದ್ಧ ಮುನಿಪನ ಸತತ ಭಜನೆ ಮಾಡಿ

ಮತಿವಂತರೆಲ್ಲರು ತೂಗಿರಿ

ತಾತನ ದಯೆಯಿಂದ ಧನ್ಯರಾದೆವೆಂದು

ಮಾತುಮಾತಿಗೆ ನೀವು ತೂಗಿರಿ ||12||

ದೇಶಕಧಿಕವಾದ ವರಚೇಳ್ಳಗುರ್ಕಿಯ

ವಾಸ ಸದ್ಗುರುವಿನ ತೂಗಿರಿ

ಆಶೆಯನೀಗುವ ವರಗಳ ಕೊಡುವಂಥ

ಈಶ ಎರ್ರಿತಾತನ ತೂಗಿರಿ ||13||ಪರಬ್ರಹ್ಮ ಜೋಗುಳ

ಜೋಜೋ ಪರಬ್ರಹ್ಮರೂಪ- ಜೋಜೋ

ಜೋಜೋ ಸಿದ್ದಯೋಗಿ ಹೃದ್ದೀಪ –ಜೋಜೋ

ಜೋಜೋ ದ್ವೈತಗುಣಾವಳಿ ಲೋಪ

ಯತಿರಾಜ ವಿರಾಜಿತ ಕರ್ಮನಿರ್ಲೇಪ- ಜೋಜೋ||1||


ಅದು ಇದು ಎನ್ನುವ ಅಖಿಳ ತತ್ವವ ಜರಿದು

ವಿದಿತ ಚಿದಾನಂದ ನೀನೆ ಎಂದರಿದು ಜೋಜೋ

ಹೃದಯದಿ ನಂಬಿ ದ್ವೈತಮತಿ ತೊರೆದು

ಸದಮಳ ಜ್ಞಾನಿಯಾಗಿಹೆ ಸುಖಿಮೆರದು-ಜೋಜೋ ||2||


ಭೂತಳದಿ ನರರೂಪವನ್ನು ನೀ ತಳೆದು

ಭೂತಪರಿಚರದ ವಿಸ್ತಾರವನು ತಿಳಿದು-ಜೋಜೋ

ಜಾತಿನಾಮ ಗಳೆಂಬ ಸಂಕಲ್ಪವಳಿದು ಎರ್ರಿತಾತನ

ನೀನೇನಿಸಿದೆ ವಾಸನೆ ಕಳೆದು- ಜೋಜೋ ||3||


ಪರಮಾರ್ಥಸುವಿಚಾರಗೈದು ಬಂಧುರದೀ

ಆರು ಸಮಾಧಿಯ ಸಾಧಿಸಿ ಭರದಿ ಜೋಜೋ

ತೋರುವ ಜಗವೆಲ್ಲ ಮಿಥ್ಯೆಯೆಂದರಿದಾ

ಪಾರಕರ್ಮವನು ವರ್ಜಿಸಿ ಬ್ರಹ್ಮನೇನೀನಾದಿ-ಜೋಜೋ ||4||


ರೂಢಿಯೊಳೆಸೆವ ಸುಕ್ಷೇತ್ರಗಳು

ನೋಡಬೇಕೆಂದು ನೀ ಪಯಣವನು ಮಾಡಿ-ಜೋಜೋ

ಸ್ವಗ್ರಾಮ ಬಿಟ್ಟು ಮಾರ್ಗವನು ಪಿಡಿದು

ನಾಡೊಳು ಚಲಿಸುತ ಮಾಡಿಯಾತ್ರೆಯನು-ಜೋಜೋ|


ಪಿತಮಾತೆ ಜನ್ಮಭೂಮಿಗಳೆಲ್ಲ ಬಿಟ್ಟು

ಕ್ಷಿತಿಯ ಭೋಗವನೆಲ್ಲ ದ್ವೇಷಿಸಿ ಸುಟ್ಟ-ಜೋಜೋ

ಮತಿಯೊಳು ವೈರಾಗ್ಯತಾಳಿ ಗೃಹಬಿಟ್ಟು ಸತ್ಯ

ಯತಿಯೆನಿಸಿದೆ ಬ್ರಹ್ಮನೊಳು ಚಿತ್ತವಿಟ್ಟು-ಜೋಜೋ||6||


ಬೆಳಗುಪ್ಪೆ ಗ್ರಾಮದ ಗುಡ್ಡಕ್ಕೆ ಬಂದು

ನಿಲುವಾದ ಕೋಡುಗಲ್ಲಿನ ಮೇಲೆ ನಿಂದು ಜೋಜೋ

ಬಲವಾಗಿ ಮರುವರುಷದವರೆಗಿದ್ದು ಅಲ್ಲಿ ನಿಲ್ಲದೆ

ಮುಂದಕ್ಕೆ ಬಂದೆ ಮಹಿಮೆಯತೋರ್ದು- ಜೋಜೋ||7||


ಎಣ್ಣೆನದಿಯೊಳು ಕೆಲದಿನ ವಾಸ ಮಾಡಿ

ಬಣ್ಣಗೆಡದೆ ಇದ್ದೆ ನೀರೊಳಗೆ ಕೂಡಿ-ಜೋಜೋ

ಪುಣ್ಯವಂತರು ನಿನ್ನ ಮಹಿಮೆಯ ನೋಡಿ

ಧನ್ಯರಾದರು ಗುರುವೆ ನಿನ್ನ ಕೊಂಡಾಡಿ-ಜೋಜೋ||8||


ನೋಡುತ ಮುಷ್ಟೂರು ಗ್ರಾಮಕ್ಕೆ ಬಂದು

ಗೌಡನಿಗೆ ಮರಣದ ಸೂಚನೆಯ ತಿಳಿಸಿ-ಜೋಜೋ

ಪಾಡಾಗಿ ಕಲ್ಲಬಸವೇಶನ ನಡಿಸಿ

ನಾಡೋಳು ಮೆರೆಸಿದೆ ಲಕ್ಷವ ಬಯಸಿ-ಜೋಜೋ||9||


ಚೆಂದದಿಂದುರವಕೊಂಡೆಗೆ ಪಯಣವಾಗಿ

ಒಂದೆ ಮನದಿ ಗ್ರಾಮನೋಡುತ್ತಾ ಪೋಗಿ-ಜೋಜೋ

ಒಂದು ಭಾವಿಯ ನೀರಿನೋಳು ನೀನು ಮುಳುಗಿ

ಮತ್ತೊಂದು ಭಾವಿಯೋಳು ತೇಲಿದೆ ಶಿವಯೋಗಿ- ಜೋಜೋ||10||

ಮೆರೆವ ಚೇಳ್ಗುರ್ಕಿಯ ಗ್ರಾಮಕ್ಕೆ ಬಂದು

ಪರಿಪರಿ ಮಹಿಮೆಯ ನಡೆಸಿದೆ ನಿಂದು ಜೋಜೋ

ಪರಮ ಶ್ರೀ ಗುರುಶಾಂತ ತೇಜನೀನೆಂದು

ಸ್ಮರಿಸುವೆ ಪಾಲಿಸೈ ಎನ್ನ ದಯಾಸಿಂಧು-ಜೋಜೋ||11||


ಮಂಗಳ

ರಾಗ ನಾಗನಾಮ ಕ್ರಿಯೆ


ಜ್ಯೋತಿ ಬೆಳಗುತಿದೆ ವಿಮಲಪರಂ

ಜ್ಯೋತಿ ಬೆಳಗುತಿದೆ|

ಮಾತು ಮನಂಗಳಿಂದತ್ತತ್ತ ಮೀರಿದ

ಸಾತಿಶಯದ ನಿರುಪಾಧಿಕ ನಿರ್ಮಲ ||ಪ||


ಶಿವಧರ್ಮನಾಳವೆಂತೆಂಬ ಕಂಬದ ಮೇಲೆ

ಸುವಿವೇಕ ಹರದಯಾಬ್ಜ ಪ್ರಣತೆಯೊಳು

ಸವೆಯದ ಸದ್ಭಕ್ತಿ ರಸತೈಲ ತೀವಿದ

ಪ್ರವಿಮಲ ಕಳೆಯಂಬ ವತ್ತಿವಿಡಿದು ದಿವ್ಯ ||1||


ಮುಸುಕಿದ ವಿಷಯ ಪತಂಗ ಬಿದ್ದುರುಳೆ ತಾ

ಮಸಬುದ್ಧಿಯೆಂಬ ಕತ್ತಲೆಯಳಿಯೇ |

ಮಸಗಿ ಸುಜ್ಞಾನವೆಂಬ ಮಹಾಪ್ರಭೆ

ಪಸರಿಸಿ ಮಾಯಾಕಾಳಿಕೆ ಪೊರ್ದದ ||2||


ಪ್ರಣವಾಕಾರದ ಗುಣಮೂರು ಮುಟ್ಟದ

ಗಣನೇಗತೀತಾರ್ಥವನೆ ತೊರುವ

ಅಣುಮಾತ್ರ ಚಲನೆಯಿಲ್ಲದ ಮೋಕ್ಷ ಚಿಂತಾ

ಮಣಿಯೆನಿಸುವ ಶಂಭುಲಿಂಗವೆ ತಾನಾದ||3||

ಶ್ರೀ ಶಿವಯೋಗಿ ಎರ್ರಿಸ್ವಾಮಿಗಳವರ ಗುಣಸ್ತೋತ್ರದ ರಗಳೆ
||ಕಂದ|| ಸನ್ನುತ ಚೇಳ್ಗುರಿಕೀಶ್ವರ
ನಿನ್ನ ನಾನೆತ್ತ ಬಲ್ಲೆ ನಾದರುನುತಿಪೇಂ
ಮನ್ನಿಸು ಮನ್ನುತಿಯಿಂದಂ
ನಿನ್ನಯ ಪದಕಿಲ್ಲಕೇಡು ಶ್ರೀ ಎರ್ರಿಸ್ವಾಮಿ||
ಮಂದಾನಿಲರಗಳೆ
ಸ್ವಾಮಿ ಶ್ರೀ ಗುರುದೇವ ದಯಾಘನ
ಸ್ವಾಮಿ ಸದಾಶುಭದಾಯಕ ಪಾವನ
ಸ್ವಾಮಿ ನಿರಾಮಯ ನಿತ್ಯನಿರಂಜನ
ಸ್ವಾಮಿ ಸುಧಾಮಯ ಭವಭಯಭಂಜನ
ಸ್ವಾಮಿ ನತಾಶ್ರಯ ದಿವ್ಯಮನೋಹರ
ಸ್ವಾಮಿ ಮಹಾಮಹಿಮಾಂಬುಧಿ ಶಶಿಕರ
ಸ್ವಾಮಿ ಚಿದಾನಂದಾಮೃತ ಪೂರಿತ
ಸ್ವಾಮಿ ಸದಾಶಿವ ರೂಪವಿರಾಜಿತ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||10||
ಸ್ವಾಮಿ ಸಕಲಸದ್ಗುಣಗಣ ಮಂಡಿತ
ಸ್ವಾಮಿ ವಿಕಲ್ಪಿತ ಮಾಯಾಭಂಜಿತ
ಸ್ವಾಮಿ ಸರ್ವಭಕ್ತಾವಳಿ ಪೂಜಿತ
ಸ್ವಾಮಿ ಪರಮ ವೈರಾಗ್ಯವಿಭೂಷಿತ
ಸ್ವಾಮಿ ಸತ್ಯ ಸುಜ್ಞಾನ ಪ್ರದೀಪಕ
ಸ್ವಾಮಿ ನಿತ್ಯ ನಿರ್ಮಲ ನಿಜರೂಪಕ
ಸ್ವಾಮಿ ನಿರ್ಭಯಾರೂಢನಿಜಾಲಯ
ಸ್ವಾಮಿ ಉಪಾಧಿರಹಿತ ಜ್ಯೋತಿರ್ಮಯ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||20||
ಸ್ವಾಮಿ ಶರಣಜನ ಕರ್ಮವಿನಾಶಕ
ಸ್ವಾಮಿ ದುರಿತಜನ ಶಿಕ್ಷಾರಕ್ಷಕ
ಸ್ವಾಮಿ ವಿಮಲ ಮಹನೀಯಚರಿತ್ರ
ಸ್ವಾಮಿ ಲೋಕನುತ ದಿವ್ಯಸುಗಾತ್ರ
ಸ್ವಾಮಿ ಸುಕೃತಸಂಸೇವಿತ ಮಾನಿತ
ಸ್ವಾಮಿ ದುಷ್ಟಮದಮತ್ಸರಮರ್ದಿತ
ಸ್ವಾಮಿ ಸಿದ್ಧ ಅವಧೂತಪ್ರಸಿದ್ಧ
ಸ್ವಾಮಿ ಕರ್ತ ನಿಜತತ್ವ ವಿಶುದ್ಧ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||30||
ಸ್ವಾಮಿ ನಿವೃತ್ತನಿರಂತರನಿಶ್ಚಲ
ಸ್ವಾಮಿ ದಿಗಂಬರ ನಿರ್ಗುಣನಿಷ್ಕಲ
ಸ್ವಾಮಿ ಕಾಮಜಿತ ಸಜ್ಜನವಂದಿತ
ಸ್ವಾಮಿ ಜಟಲಸಂಸಾರ ವಿವರ್ಜಿತ
ಸ್ವಾಮಿ ಮೌನಮುದ್ರಾಂಕಿತ ರಂಜಿತ
ಸ್ವಾಮಿ ಶಾಂತಿ ಸುಖಪೂರ್ಣ ವಿಕಾಸಿತ
ಸ್ವಾಮಿ ಪರಮ ಪಂಚಾಕ್ಷರಿ ನಿಲಯ
ಸ್ವಾಮಿ ಸ್ಮರಾಂಕುಶ ಭಕ್ತಸುಹೃದಯ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||40||
ಸ್ವಾಮಿ ಜಗನ್ಮಯ ಜೀವಸುಚೇತನ
ಸ್ವಾಮಿ ಸದಾಗತಿ ಹಂಸನಿಕೇತನ
ಸ್ವಾಮಿ ಸಾಧುಜನ ಮೋಕ್ಷಪ್ರದಾಯಕ
ಸ್ವಾಮಿ ಭಜಕರಘುಸಂಹರ ಪಾಲಕ
ಸ್ವಾಮಿ ವರನಿರಾಭಾರಿ ನಿರಾಕುಲ
ಸ್ವಾಮಿ ನಿರಾಲಂಬಾಯತಲೋಲ
ಸ್ವಾಮಿ ವರದನಿರ್ಲೇಪಾಖಂಡಿತ
ಸ್ವಾಮಿ ಸಮಾಧಿ ಸ್ಥಿತಿಗತಿಸತತ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||50||
ಸ್ವಾಮಿ ಸರ್ವಸ್ವಾತಂತ್ರಸನಾತನ
ಸ್ವಾಮಿ ಸರ್ವಕಾಲಾದಿವಿನೂತ
ಸ್ವಾಮಿ ಊರ್ಧ್ವರತಿಭೋಗಪರಾಯಣ
ಸ್ವಾಮಿ ಕಾಲಗತಿಗನಾಧಿಕಾರಣ
ಸ್ವಾಮಿ ನಿಗೂಢನಿಗರ್ವ ನಿದರ್ಶಕ
ಸ್ವಾಮಿ ನಿರಾಶ ನಿರಾಗಸ್ವಭಾವಕ
ಸ್ವಾಮಿ ಶಕ್ತಿಮಯ ಸಹಜಶಾಶ್ವತ
ಸ್ವಾಮಿ ವಿವಾದ ವಿವರ್ಜಿತನಿರತ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||60||
ಸ್ವಾಮಿ ಜಟಾಮಕುಟಾಗ್ರ ಸುಶೋಭಿತ
ಸ್ವಾಮಿ ವಿಶಾಲಫಾಲ ವರಭಸಿತ
ಸ್ವಾಮಿ ಜಿತೇಂದ್ರಿಯ ತೇಜಸುವದನ
ಸ್ವಾಮಿ ನಿಗ್ರಹಾನುಗ್ರಹ ಸದನ
ಸ್ವಾಮಿ ಸಗುಣಘನ ಬ್ರಹ್ಮಸ್ವರೂಪ
ಸ್ವಾಮಿ ನಿರ್ಗುಣ ಬ್ರಹ್ಮವಿರೂಪ
ಸ್ವಾಮಿ ನಾದಬಿಂದುಕಲಾ ವಿಲಸಿತ
ಸ್ವಾಮಿ ನಾದಬಿಂದುಕಲಾ ವಿರಹಿತ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||70||
ಸ್ವಾಮಿ ಸ್ಥೂಲ ಸೂಕ್ಷ್ಮಾಕರ ಕಾರಣ
ಸ್ವಾಮಿ ಬೃಹನ್ಮಯ ವಿಶ್ವಾವರಣ
ಸ್ವಾಮಿ ಸರ್ವ ಜೀವಾಂತರ್ಗತಮತಿ
ಸ್ವಾಮಿ ಸರ್ವ ಜೀವಾನುಗ್ರಹತತಿ
ಸ್ವಾಮಿ ಜಡಾಜಡ ತತ್ವದಮೂಲ
ಸ್ವಾಮಿ ನಿಜಾನಜ ವಿಸ್ಮಯಲೀಲ
ಸ್ವಾಮಿ ಶೂನ್ಯನಿಶ್ಯೂನ್ಯ ನಿಜಾಲಯ
ಸ್ವಾಮಿ ನಿರ್ವಿಕಲ್ಪಾನಂದಮಯ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||80||
ಸ್ವಾಮಿ ಅವಸ್ಥಾತ್ರಯ ಗತಿದೂರ
ಸ್ವಾಮಿ ಅಜರಅಕ್ಷರ ಸುವಿಚಾರ
ಸ್ವಾಮಿ ಅತರ್ಕ್ಯ ಅಗಮ್ಯ ಅಗಾಧ
ಸ್ವಾಮಿ ಅಮಿತ ಅದ್ವಯ ಅವಿರೋಧ
ಸ್ವಾಮಿ ಅಚಿಂತ್ಯ ಅಮಲ ಅವಿನಾಶ
ಸ್ವಾಮಿ ಅಜಾತ ಅಚಂಚಲಧೀಶ
ಸ್ವಾಮಿ ಸರೂಪ ನಿರೂಪ ಸಮನ್ವಿತ
ಸ್ವಾಮಿ ಶಬ್ದನಿಶ್ಯಬ್ದ ಸಮಾಹಿತ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ ||90||
ಸ್ವಾಮಿ ಶಿಷ್ಯ ತಿಕ್ಕಯ್ಯಪ್ರಕಾಶಿತ
ಸ್ವಾಮಿ ವಿದಿತಶಿವರಾಮ ಭಕ್ತನುತ
ಸ್ವಾಮಿ ಭಕ್ತಸಂದೋಹ ಮನೋರಥ
ಸ್ವಾಮಿ ಭಕ್ತಿಮಠವಾಸ ವಿರಾಜಿತ
ಸ್ವಾಮಿ ದಾಸಜನ ಸ್ವಪ್ನಾಂತರ್ಗತ
ಸ್ವಾಮಿ ಗುಪ್ತವರದಾಯಕ ನಿರತ
ಸ್ವಾಮಿ ಸ್ವಾಮಿ ಎರ್ರಿಸ್ವಾಮಿ ಕೃಪಾಕರ
ಸ್ವಾಮಿ ಯಶೋಧರ ಚೇಳ್ಗುರಿಕೀಶ್ವರ
ಸ್ವಾಮಿ ಜಯತು ಎರ್ರಿಸ್ವಾಮಿ ನಮೋಸ್ತುತೆ
ಸ್ವಾಮಿ ನಮೋಸ್ತುತೆ ಸ್ವಾಮಿ ನಮೋಸ್ತುತೆ ||100||
||ಕಂ|| ಎಂದಿಂತನುದಿನ ನಿಮ್ಮಂ
ವಂದಿಸಿ ನುತಿಗೈವ ಭಕ್ತಿಭಾಗ್ಯವನಿತ್ತೀ
ಕಂದನ ನಿಮ್ಮವನೆನಿಸು
ತ್ತೆಂದುಂ ಕೈಬಿಡದೆಸಲಹು ಎರ್ರಿಸ್ವಾಮಿ||
||ಮಂಗಳ||


ಶ್ರೀ ಶಿವಯೋಗಿ ಎರ್ರಿತಾತನವರ ನೂರೆಂಟು ನಾಮಾವಳಿ
||ಕಂದ || ಶ್ರೀಮದಗಜಾಧಿ ನಾಯಕ
ಧಾಮಮದೆನಿಸಿರ್ದುದಾವಮಹಿಮನತಾಣಂ
ಭೂಮಹಿತ ಚೇಳ್ಳಗುರ್ಕಿ
ಗ್ರಾಮಂ ನಾನಾತಗೆರ್ರಿತಾತಗೆ ನಮಿಪೇಂ||
1 ಶ್ರೀಮದಮಲರೂಪ ಚಿನ್ಮಯಪ್ರದೀಪ ಎರ್ರಿತಾತ
2 ಕಾಮಿತಾರ್ಥ ಸುಪ್ರದಾನ ಗುಣಕಲಾಪ ಎರ್ರಿತಾತ
3 ನಿನ್ನ ಲೀಲೆಯರಿಯದವರು ಹುಚ್ಚರಾಗಿ ಎರ್ರಿತಾತ
4 ನಿನ್ನ ಹುಚ್ಚನೆಂದು ಕರೆದರಮಳಯೋಗಿ ಎರ್ರಿತಾತ
5 ನಿನ್ನ ಜನನದೆಡೆಯ ಕುರುಹು ತಿಳಿಯದೆಮಗೆ ಎರ್ರಿತಾತ
6 ನಿನ್ನ ತಂದೆ ತಾಯಿಗಳಾರೊ ತಿಳಿಯದೆಮಗೆ ಎರ್ರಿತಾತ
7 ನಿನ್ನ ಪಿತೃಗಳಿಟ್ಟ ಹೆಸರು ಗೊತ್ತದಿಲ್ಲ ಎರ್ರಿತಾತ
8 ನಿನ್ನ ವಂಶಮತದ ಬಗೆಯನರಿದುದಿಲ್ಲ ಎರ್ರಿತಾತ
9 ನಿನ್ನ ಜೀವನದ ಚರಿತ್ರವರಿಯಲಿಲ್ಲ ಎರ್ರಿತಾತ
10 ನಿನ್ನ ಭಾವದಿಂಗಿತವನು ಶಿವನೆಬಲ್ಲ ಎರ್ರಿತಾತ
11 ಬಾಲನಂತೆಯೊಮ್ಮೆಯಧಿಕಮತ್ತನಂತೆ ಎರ್ರಿತಾತ
12 ಲೀಲೆವಿಡಿದು ಕಂಡಕಡೆಯೊಳಿರ್ದೆಯಂತೆ ಎರ್ರಿತಾತ
13 ಒಂದು ಬಾವಿಯೊಳಗದೊಮ್ಮೆ ನೀನು ಮುಳುಗಿ ಎರ್ರಿತಾತ
14 ಅಂದು ಬೇರೆ ಬಾವಿಯಿಂದ ಬಂದೆಯೋಗಿ ಎರ್ರಿತಾತ
15 ಸಾಯಲೆಮ್ಮೆ ಕರುವದಕ್ಕೆ ಹರಣವಿತ್ತೆ ಎರ್ರಿತಾತ
16 ತಾಯಿಮೊಲೆಯ ಹಾಲನಿತ್ತೆಯದಕೆ ಮತ್ತೆ ಎರ್ರಿತಾತ
17 ಬಿದ್ದು ಸತ್ತ ಹದ್ದಕಂಡು ನೀನುದಯದೆ ಎರ್ರಿತಾತ
18 ಎದ್ದು ಹೋಗಲುಸುರೆ ಪಾರಿಪೋಯ್ತುಜವದೆ ಎರ್ರಿತಾತ
19 ಹುತ್ತ ದಂತಿಕದೊಳೆನಿಂತು ನಲಿವ ನಿನಗೆ ಎರ್ರಿತಾತ
20 ಚಿತ್ತವಲರೆಬಂದು ಭಕ್ತನೋರ್ವ ನೆರಗೆ ಎರ್ರಿತಾತ
21 ಮುಚ್ಚಿಸುತ್ತಲವನ ಕಣ್ಣಹುತ್ತದಿಂದೆ ಎರ್ರಿತಾತ
22 ಕಚ್ಚದಂತೆ ಹಾವತೆಗೆದು ಮೋದದಿಂದೆ ಎರ್ರಿತಾತ
23 ಮುಚ್ಚಿ ಭಕ್ತನವನ ಕಂಬಳಿಯೊಳಗದನು ಎರ್ರಿತಾತ
24 ಬಿಚ್ಚದಂತೆ ಸದನ ಕೊಯ್ಯಲೊರೆಯುತದನು ಎರ್ರಿತಾತ
25 ಎಚ್ಚರದೊಳು ಜಗಲಿಯಲ್ಲಿ ಪೂಜೆಗೈದು ಎರ್ರಿತಾತ
26 ಬಿಚ್ಚಿನೋಡು ಕಂಬಳಿಯೊಳಗೆಂದು ನುಡಿದು ಎರ್ರಿತಾತ
27 ಕಳುಹಲೊಂದಿ ತನ್ನ ಮನೆಯ ಭಕ್ತನವನು ಎರ್ರಿತಾತ
28 ತಿಳುಹಿದಂತೆ ಗೈದು ಬಿಚ್ಚೆ ಕಂಬಳಿಯನು ಎರ್ರಿತಾತ
29 ಹಾವು ಚಿನ್ನವಾಗಿ ತಾನು ಹೊಳದುದಂತೆ ಎರ್ರಿತಾತ
30 ದೇವರಾದ ನಿನ್ನದಿಂತು ಲೀಲೆಯಂತೆ ಎರ್ರಿತಾತ
31 ಸುವಿಮಳಾತ್ಮ ನೀನು ಹಳ್ಳಿಯೊಂದರಲ್ಲಿ ಎರ್ರಿತಾತ
32 ಶಿವನ ಗುಡಿಯೊಳಿರುವ ಕಲ್ಲಬಸವನಲ್ಲಿ ಎರ್ರಿತಾತ
33 ಇಟ್ಟು ಕೃಪೆಯ ನೀನು ಕರೆಯೆ ಬಸವನವನು ಎರ್ರಿತಾತ
34 ನೆಟ್ಟನೊಲ್ದು ಬಂದನಂತೆ ಶಿವನೆ ನೀನು ಎರ್ರಿತಾತ
35 ಇಂತದೆಂತೊ ಲೀಲೆಗಳನು ಮಾಡುತಿರ್ದು ಎರ್ರಿತಾತ
36 ಚಿಂತಿತವನು ಭಕ್ತಜನರಿಗೀಯುತಿರ್ದು ಎರ್ರಿತಾತ
37 ಕಡೆಗೆ ಚೇಳಗುರಿಕೆಯೂರೊಳಿರ್ದು ನೀನು ಎರ್ರಿತಾತ
38 ಮೃಡನ ಸತ್ ಕ್ಷೇತ್ರವಾಗಿ ಮಾಡುತದನು ಎರ್ರಿತಾತ
39 ಭಾವುಕರಿಗೆ ಭಾವದಲ್ಲಿ ಬ್ರಹ್ಮವಾಗಿ ಎರ್ರಿತಾತ
40 ಭಾವಿಸಿದುದ ಕೊಟ್ಟೆಯಲ್ತೆ ದಾನಿಯಾಗಿ ಎರ್ರಿತಾತ
41 ಕಾಮರಹಿತನಾದೊಡೇನು ನಂಬುವರಿಗೆ ಎರ್ರಿತಾತ
42 ಕಾಮಿತವನು ಕೊಡುವ ಕಾಮವಿಹುದು ನಿನಗೆ ಎರ್ರಿತಾತ
43 ಭಕ್ತಭಾವಕೊಲಿದ ಶಿವನ ಶಕ್ತಿ ನೀನು ಎರ್ರಿತಾತ
44 ಮುಕ್ತನಾಗಿ ಭುಕ್ತಿಮುಕ್ತಿದಾತೃ ನೀನು ಎರ್ರಿತಾತ
45 ಶಿವನ ಹುಚ್ಚು ನಿನ್ನದೆಂದು ನಂಬಿದವರು ಎರ್ರಿತಾತ
46 ಶಿವನ ಸುಖವ ನಿನ್ನ ದಯದೆ ಪಡೆದರವರು ಎರ್ರಿತಾತ
47 ಭುವಿಯೊಳಿವನು ಹುಚ್ಚನೆಂದು ಬೈದಜನರು ಎರ್ರಿತಾತ
48 ಭವದ ದುಃಖವಹ್ನಿಯಲ್ಲಿ ಬೆಂದರವರು ಎರ್ರಿತಾತ
49 ತಿಕ್ಕವೆಸರಿನಯ್ಯನೋರ್ವನಕ್ಕರೆಯೊಳು ಎರ್ರಿತಾತ
50 ತಿಕ್ಕನಾಗಿ ಮೆರುವ ನಿನ್ನ ಸನ್ನಿಧಿಯೊಳು ಎರ್ರಿತಾತ
51 ಬಂದು ನೆಲಸಿ ಬಂದನೆಲೆಯ ತಿಳಿಸದಂತೆ ಎರ್ರಿತಾತ
52 ಹೊಂದಿ ನಿನ್ನ ಸೇವೆಯನ್ನು ತ್ಯಜಿಸದಂತೆ ಎರ್ರಿತಾತ
53 ಮಾಡಿ ಭಿಕ್ಷೆ ಬೇಡಿತಂದು ನಿನಗೆ ಮಠವ ಎರ್ರಿತಾತ
54 ಮಾಡುತಲ್ಲಿ ನಿನ್ನನಿರಿಸಿ ಭಕ್ತಕುಲವ ಎರ್ರಿತಾತ
55 ಕೂಡಿಸುತ್ತೆ ನಿನ್ನ ಪೂಜೆಗೈಸಿ ಎರ್ರಿತಾತ
56 ನಾಡದೇವರಾಗಿಸಿದನು ಭಕ್ತಿವಹಿಸಿ ಎರ್ರಿತಾತ
57 ಇಂತುಗೈದ ತಿಕ್ಕಶಿಷ್ಯಗಚಲಸುಖವ ಎರ್ರಿತಾತ
58 ಸಂತಸದೊಳು ಕರುಣಿಸುತ್ತೆ ಬಳಿಕ ಮಠವ ಎರ್ರಿತಾತ
59 ಬಿಟ್ಟು ಹೋಗಲೊರೆದ ನಿನ್ನ ಮಾತಿನಂತೆ ಎರ್ರಿತಾತ
60 ಹುಟ್ಟದಳಲ ಸಹಿಸುತೆಂತೊ ಪೋದನಂತೆ ಎರ್ರಿತಾತ
61 ಆತನೊರೆದ ಭಕ್ತಿಮಯದ ಗೀತೆಗಳ ಎರ್ರಿತಾತ
62 ಪ್ರೀತಿಯಿಂದ ಜನರು ಪಾಡುತಿರ್ದುರವನು ಎರ್ರಿತಾತ
63 ಏಕೆಗೈದುದಿದರ ಗುಟ್ಟು ನಿನಗೆ ಗೊತ್ತು ಎರ್ರಿತಾತ
64 ಸಾಕು ನಮ್ಮಗದರ ವಿಷಯವೆಂತುಗೊತ್ತು ಎರ್ರಿತಾತ
65 ನಮ್ಮ ತಪ್ಪನಂತವದನು ನೋಡದಂತೆ ಎರ್ರಿತಾತ
66 ನಮ್ಮ ಸಲಹು ನಿನ್ನ ಕೃಪೆಯನಂತವಂತೆ ಎರ್ರಿತಾತ
67 ಬೆಂಗಳೂರ ಶುದ್ಧ ಭಕ್ತನೋರ್ವನಲ್ಲಿ ಎರ್ರಿತಾತ
68 ತುಂಗ ಕೃಪೆಯುನಿಡುತಲೊಗೆವ ಕನಸಿನಲ್ಲಿ ಎರ್ರಿತಾತ
69 ನಿನ್ನ ರೂಪುದೋರಲಾಸುಭಕ್ತವರನು ಎರ್ರಿತಾತ
70 ತನ್ನ ಬಯಕೆಗಳನು ಬೇಡೆ ಕೊಟ್ಟು ನೀನು ಎರ್ರಿತಾತ
71 ಇನ್ನು ಭಕ್ತನಾತನಧಿಕ ಸೇವೆಯಾಂತು ಎರ್ರಿತಾತ
72 ಉನ್ನತಿಯನು ನಿನ್ನ ಮಠವು ಪಡೆದುದಿಂತು ಎರ್ರಿತಾತ
73 ನಿನ್ನ ಸೇವೆಗಾಗಿ ನಿನ್ನ ಮಠವಿದೆಂದು ಎರ್ರಿತಾತ
74 ನಿನ್ನ ಮೂರ್ತಿ ಮಾಡಿ ಪೂಜೆಗಿಟ್ಟೆವಿಂದು ಎರ್ರಿತಾತ
75 ಮಠದೊಳಿಲ್ಲ ನಿನ್ನ ನಿಜದಮೂರ್ತಿ ನೋಡೆ ಎರ್ರಿತಾತ
76 ದಿಟದ ಭಕ್ತರೆದೆಯೊಳೊಪ್ಪತಿಹುದುನಾಡೆ ಎರ್ರಿತಾತ
77 ಯಾರು ಬಾವಿತೋಡಿಸಿದೊಡಮಾವಕಡೆಗೆ ಎರ್ರಿತಾತ
78 ನೀರನಿನಿತು ಕಾಣದಂತೆ ಕಷ್ಟವಾಗೆ ಎರ್ರಿತಾತ
79 ಆಮಹಾ ಬಳ್ಳಾರಿಯೋರ್ವ ಭಕ್ತನಲ್ಲಿ ಎರ್ರಿತಾತ
80 ಸ್ವಾಮಿ ನೀನು ಕೃಪೆಯ ತೋರಿ ಶೀಘ್ರದಲ್ಲಿ ಎರ್ರಿತಾತ
81 ನಿಗಮನುತನೆ ನಿನ್ನ ಮಠದೊಳಾತನಿಂದ ಎರ್ರಿತಾತ
82 ಅಗಿಸೆ ಬಾವಿಯದರ ಸವಿಯ ನೀರಿನಿಂದ ಎರ್ರಿತಾತ
83 ಬರುವ ಜನರಿಗಾಗುತಿರ್ದ ನೀರ ಬರುವ ಎರ್ರಿತಾತ
84 ಹರಿದು ಜನರಿಗಾಯ್ತು ನಿನ್ನ ಲೀಲೆಯರಿವು ಎರ್ರಿತಾತ
85 ನಿನ್ನ ನಂಬಿದವರಿಗಿಲ್ಲ ಬಡತನವದು ಎರ್ರಿತಾತ
86 ನಿನ್ನ ಪೂಜಿಸುವರ ರೋಗಬಾಧೆಯಿರದು ಎರ್ರಿತಾತ
87 ನಿನ್ನ ಸೇವಿಸುವರ ವಂಶವೃದ್ಧಿಯಾಯ್ತು ಎರ್ರಿತಾತ
88 ನಿನ್ನ ನೆನೆವ ಜನರ ಮನಕೆ ಶಾಂತಿಯಾಯ್ತು ಎರ್ರಿತಾತ
89 ಉಳ್ಳವರ್ಕಳೈದೆ ನಿನಗೆ ಕೊಟ್ಟ ಧನವ ಎರ್ರಿತಾತ
90 ಇಲ್ಲದವರು ಕದಿಯಲದನು ನೋಡಿನಗುವ ಎರ್ರಿತಾತ
91 ಬೇಕು ಬೇಡವೆಂಬೆರಡ ಬಿಟ್ಟಗುರುವೆ ಎರ್ರಿತಾತ
92 ಲೋಕದಖಿಳಭಕ್ತ ಜನರಿಗಮರ ತರುವೆ ಎರ್ರಿತಾತ
93 ಶರಣನಿವಹ ಹೃದಯ ಕಮಲಭಾನು ನೀನು ಎರ್ರಿತಾತ
94 ಚರಣಸೇವಕರಿಗೆ ಕಾಮಧೇನು ನೀನು ಎರ್ರಿತಾತ
95 ನಿನ್ನಲಸದನು ಸುಶಕ್ತಿ ನೋಡೆ ಎರ್ರಿತಾತ
96 ನಿನ್ನ ಬಳಿಗೆ ನಮ್ಮ ನೆಳೆವುದಲ್ತೆನಾಡೆ ಎರ್ರಿತಾತ
97 ನಿನಗೆ ಚಿನ್ನದಂತೆಮೈಯ ಬಣ್ಣವಿದ್ದು ಎರ್ರಿತಾತ
98 ಮಿನುಗುತಿರ್ದುದಂತೆ ಶಿವನ ಬೆಳಗಹೊದ್ದು ಎರ್ರಿತಾತ
99 ನಿನ್ನ ಬಿಳಿಯ ಜಡೆಯು ಮುದ್ದುಗಡ್ಡ ಮೀಸೆ ಎರ್ರಿತಾತ
100 ಇನ್ನು ನೋಡಲೊಗೆವುದಲ್ತೆ ನಮಿಸುವಾಶೆ ಎರ್ರಿತಾತ
101 ಕುರುಡ ಕುಂಟ ಜನಕ್ಕೆ ಕಣ್ಣ ಕಾಲನಿತ್ತ ಎರ್ರಿತಾತ
102 ಬರಡು ಹಯನವಾಗಿಸಿರ್ದ ಮಹಿತ ಚಿತ್ತ ಎರ್ರಿತಾತ
103 ಜಯವು ಜನಮನೋ ಮುದಾಬ್ಧಿ ಚಂದ್ರ ನಿನಗೆ ಎರ್ರಿತಾತ
104 ಜಯವು ಜನನದೂರ ಸುಗುಣಸಾಂದ್ರ ನಿನಗೆ ಎರ್ರಿತಾತ
105 ಜಯವು ಚೇಳ್ಳಗುರಿಕೆಯಮಳ ಮಠದೊಳಿರುವ ಎರ್ರಿತಾತ
106 ಜಯವು ಭಕ್ತರಮಳಮನದ ಮನೆಯೊಳಿರುವ ಎರ್ರಿತಾತ
107 ವಂದಿಸುವೆವು ನಿನ್ನ ಪಾದಪಂಕಜಕ್ಕೆ ಎರ್ರಿತಾತ
108 ವಂದಿಸುವೆವು ನಿನ್ನ ಕೃಪೆಯು ನಮ್ಮೊಳಿರ್ಕೆ ಎರ್ರಿತಾತ
||ಕಂ||ಭೂಮಿಯೊಳಾರಾರೆರ್ರಿ
ಸ್ವಾಮಿಯ ನೂರೆಂಟು ವಿಮಳತರನಾಮಗಳಂ ||
ಪ್ರೇಮದೆ ಪಠಿಸುವರನು ದಿನ
ಮಾಮನಜರ್ಗಿಷ್ಟ ಸಿದ್ದಿಯಕ್ಕುಂ ನಿಸದಂ ||
- ಇತಿ ಶಿವಂ-

ಪವಾಡಗಳು

ಚೇಳ್ಳಗುರ್ಕಿಗೆ ಎರ್ರಿಸ್ವಾಮಿಗಳು ಬರುವ ಮುಂಚಿನ ಮಹಿಮೆಗಳು ಕೆಲವು ಜನ ಹೇಳಿಕೊಳ್ಳುತ್ತಿರುವುದು ನೋಡಿದರೆ, ಇವರು ಕಲ್ಯಾಣದುರ್ಗ, ಬೆಳಗುಪ್ಪೆ, ಮುಷ್ಟೂರು, ಉರವಕೊಂಡ, ವೆಲುಗೊಂಡೆ, ಚೀಕಲಗುರಿಕಿಗಳಲ್ಲಿದ್ದಂತೆಯೂ ಅಲ್ಲಿ ಕೆಲವು ಪವಾಡಗಳಿಂದ ಜನರನ್ನು ಅಚ್ಚರಿಗೊಳಿಸಿದಂತೆಯೂ ತಿಳಿದುಬರುತ್ತದೆ.

ಪೂಜೆಯ ಸಮಯ

ಉದಯ 6 AM to 8 AM
ಸ೦ಜೆ 6 PM to 8 PM

ಫೋಟೋಗಳು

ಸಂಪರ್ಕಿಸಿ

ಟ್ರಸ್ಟ್ ಕಮಿಟಿ

ಶ್ರೀ ಎರ್ರಿಸ್ವಾಮಿ ಜೀವಸಮಾಧಿ,

ಚೇಳ್ಳಗುರ್ಕಿ – 583111

ಬಳ್ಳಾರಿ (ತಾಲ್ಲೂಕು ಮತ್ತು ಜಿಲ್ಲಾ)

   
08392-295401, 94804 75401
   
This email address is being protected from spambots. You need JavaScript enabled to view it.