ಚೇಳ್ಳಗುರ್ಕಿ ಶ್ರೀ ಎರ್ರಿತಾತನವರ ಶಿವಮಯ ಜೀವನ ಚರಿತ್ರೆ
ನೋಡುವವರಿಗೆ ಕುರುಹಾಗಿ, ಅನುಗ್ರಹದ ಗುರುವಾಗಿ, ಕುರುಹಳಿದ ಎರ್ರಿಸ್ವಾಮಿಗಳ ಮಹಿಮಾನ್ವಿತ ಪರವಶ ಜೀವನದ ಅಂಶಗಳನ್ನು ಐತಿಹಾಸಿಕ ದೃಷ್ಟಿಯಿಂದ ವಿವರಿಸುವುದು ಸಾಧ್ಯವಲ್ಲ. ಏಕೆಂದರೆ ಎಲ್ಲರಂತೆ ಅವರಿರಲಿಲ್ಲ. ಅವರಿದ್ದ ರೀತಿಯನ್ನು ಎಲ್ಲರು ಅರಿಯುವಂತಿರಲಿಲ್ಲ. ಆದ್ದರಿಂದ ಲೌಕಿಕ ವರ್ತನೆಯನ್ನು ಕಂಡು ಅಪಹಾಸ್ಯದಿಂದ “ಇವರೊಬ್ಬ ಎರ್ರಿ (ಹುಚ್ಚ) ಸ್ವಾಮಿ’’ ಎಂದು ಕರೆದ ಹುಚ್ಚು ಜನರ ಹೆಸರೇ ಇದುವರೆಗೂ ನಾಡಿನಲ್ಲಿ ಪ್ರಚಲಿತವಾಗಿ ಪ್ರಸಿದ್ಧಿಯಾಗಿದೆ.
ಹೆತ್ತತಾಯಿ ತಂದೆಗಳು, ಹೊತ್ತನಾಡು, ಪಡೆದ ಹೆಸರು, ಹಿಡಿದ ಕುಲಗೋತ್ರ ಇಂದಿಗೂ ತಿಳಿದುಬಂದಿಲ್ಲ. ಅವರನ್ನು ನೋಡಿದವರು, ಅವರ ಸೇವೆಯಲ್ಲಿದ್ದವರು ಇಂದಿಗೂ ಕೆಲವರಿದ್ದಾರೆ. ಆದರೆ ಇವರಾರಿಗೂ ಅವರಾರೆಂಬುದು ತಿಳಿಯದು.
ಪರವಶ ಸ್ಥಿತಿಯ ಎರ್ರಿಸ್ವಾಮಿಗಳ ಗತಿಮತಿಗಳು ವಿಚಿತ್ರವೂ, ಊಹಾತೀತವೂ ಲೌಕಿಕಾನುಭವಕ್ಕೆ ನಿಲುಕಲಾರದವುಗಳೂ ಆಗಿದ್ದವು. ಊಟ,ಉಡುಗೆ,ಮಾಟ, ಕೂಟಗಳ ಅವರ ನಿತ್ಯಜೀವನವು ನೋಡುವ ಕಣ್ಣಿಗೆ ಆಶ್ಚರ್ಯಕರವಾಗಿಯೂ ಅರಿಯುವ ಬುದ್ದಿಗೆ ಮರೆಯಾಗಿಯೂ ನಡೆವ ನಡತೆಗೆ ಜಡವಾಗಿಯೂ ಪ್ರಾಪಂಚಿಕ, ಸಾಮಾಜಿಕ ವೃತ್ತಿಗೆ ವ್ಯತಿರಿಕ್ತವಾಗಿಯೂ ಇದ್ದವು.
ಮಹಾತ್ಮರು ಬಾಲ, ಉನ್ಮತ್ತ, ಪಿಶಾಚಿಗಳ ವರ್ತನೆಯಂತಿರುವರೆಂದು ಹೇಳುವ ಅನುಭವದ ನುಡಿಯು ಎರ್ರಿಸ್ವಾಮಿಗಳಿಗೆ ಸರಿಯಾಗಿ ಅನ್ವಯಿಸಿತ್ತು. ಹಸಿವು ತೃಷೆಗಳ ಅರಿವಿಲ್ಲದೆ, ಮಾನ, ಅವಮಾನ, ಭಯ, ನಾಚಿಕೆಗಳ ಗುರುತಿಲ್ಲದೆ, ಭಾವಬತ್ತಲೆಯ ಕುರುಹೆಂಬಂತೆ, ತನು ಬತ್ತಲೆಯಾಗಿ, ಅರೆಗಣ್ಣಿನ ನೋಟದಿಂದ ಕತ್ತಲು, ಬೆಳಕುಗಳ ಹಂಗಳಿದು ಜನಸಂಗದಲ್ಲಿ ನಿಸ್ಸಂಗಿಯಾಗಿ, ನಿರಂಕುಶನಾಗಿ ತನಗಿಷ್ಟಬಂದಂತೆ ಹುಚ್ಚರೆಂದು ಕರೆದ ಜನರಿಗೆ ಹುಚ್ಚು ಹಿಡಿಸುತ್ತ ಸುಳಿದಾಡಿದರು.
ಇಂತಹ ಸುಳಿದಾಟವನ್ನು ಹುಚ್ಚೆಂದು ಅಪಹಾಸ್ಯಗೈದು, ನಕ್ಕು ಅಲಕ್ಷಿಸುವ ಜನರು ನಮ್ಮ ದೇಶದಲ್ಲಿದ್ದರೂ, ಇಂತಹ ಹುಚ್ಚನಲ್ಲಿಯೇ ಯಾವುದೋ ಅವ್ಯಕ್ತ ಮಹಿಮೆಯು ಅಡಗಿರುತ್ತದೆಂದು ನಂಬಿ, ಆ ಹುಚ್ಚನ ವಿಪರೀತ ಚರ್ಯಗಳನ್ನು ಸಹಿಸಿ ಸೇವೆಯಲ್ಲಿದ್ದು, ಆತನ ಆಶೀರ್ವಾದ ಅನುಗ್ರಹಕ್ಕೆ ಪಾತ್ರರಾಗಿ ಧನ್ಯರಾಗುವ ಭಕ್ತರು ಇದ್ದಾರೆ.